ವಿಳಾಸ ತಪ್ಪಾಗಿದ್ದಕ್ಕೆ ವಾಗ್ವಾದ ನಡೆದ ಬಳಿಕ ಗ್ರಾಹಕರೋರ್ವರ ಸಂಬಂಧಿಗೆ ಡೆಲಿವರಿ ಬಾಯ್ ಓರ್ವ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದಿದೆ.
ಘಟನೆ ಮೇ 21ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಿನಸಿ ಸಾಮಗ್ರಿ ಡೆಲಿವರಿ ಮಾಡಲು ಬಂದಿದ್ದ ಝೆಫ್ಟೋ ಡೆಲಿವರಿ ಬಾಯ್ ವಿಷ್ಣುವರ್ಧನ್ ಎಂಬಾತ ಮಹಿಳಾ ಗ್ರಾಹಕರೋರ್ವರ ಸಂಬಂಧಿ ಶಶಾಂಕ್ ಎಂಬುವವರ ಕಣ್ಣಿಗೆ ಪಂಚ್ ಮಾಡಿ, ಹಲ್ಲೆ ನಡೆಸಿ, ಪರಾರಿಯಾಗಿದ್ದಾನೆ. ಶಶಾಂಕ್ ಅವರ ಕಣ್ಣಿನ ಕೆಳಭಾಗದ ಮೂಳೆ ಮುರಿದಿದೆ.
ಶಶಾಂಕ್ ಅವರ ನಾದಿನಿ ಝೆಪ್ಟೋದಲ್ಲಿ ದಿನಸಿ ಸಾಮಗ್ರಿ ಆರ್ಡರ್ ಮಾಡಿದ್ದರು. ಆರ್ಡರ್ ಡೆಲಿವರಿ ವಿಳಾಸ ಬದಲಾಗಿದ್ದಕ್ಕೆ ಡೆಲಿವರಿ ಬಾಯ್ ವಿಷ್ಣುವರ್ಧನ್ ನಿಂದನೆ ಮಾಡಿದ್ದಾನೆ. ನಾದಿನಿಯನ್ನು ನಿಂದಿಸಿದ್ದಕ್ಕೆ ಮನೆಯಿಂದ ಹೊರಬಂದು ಶಶಾಂಕ್ ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಡೆಲಿವರಿ ಬಾಯ್ ವರ್ತನೆ ಕಂಡು ಶಶಾಂಕ್ ಪೊಲೀಸರಿಗೆ ಕರೆ ಮಾಡಲು ಮುಂದಾದರು.
ಬೆಂಗಳೂರು | ವಿಳಾಸ ತಪ್ಪಾಗಿದ್ದಕ್ಕೆ ವಾಗ್ವಾದ: ಹಲ್ಲೆ ನಡೆಸಿ ಪರಾರಿಯಾಗಿದ್ದ ಡೆಲಿವರಿ ಬಾಯ್ ವಿರುದ್ಧ ಎಫ್‌ಐಆರ್
— eedina.com ಈ ದಿನ.ಕಾಮ್ (@eedinanews) May 24, 2025
ವಿಳಾಸ ತಪ್ಪಾಗಿದ್ದಕ್ಕೆ ವಾಗ್ವಾದ ನಡೆದ ಬಳಿಕ ಗ್ರಾಹಕರೋರ್ವರ ಸಂಬಂಧಿಗೆ ಡೆಲಿವರಿ ಬಾಯ್ ಓರ್ವ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದಿದೆ. ಘಟನೆ ಮೇ 21ರಂದು ನಡೆದಿದ್ದು, ತಡವಾಗಿ… pic.twitter.com/MZQYIa2lXy
ಪೊಲೀಸರ ಹೆಸರು ಹೇಳುತ್ತಿದ್ದಂತೆ ದ್ವಿಚಕ್ರ ವಾಹನದಿಂದ ಇಳಿದು ಬಂದು ಡಿಲಿವರಿ ಬಾಯ್ ವಿಷ್ಣವರ್ಧನ್ ಗ್ರಾಹಕ ಶಶಾಂಕ್ ಅವರ ಕಣ್ಣಿಗೆ ಪಂಚ್ ಮಾಡಿದ್ದಾನೆ. ಇದರಿಂದ ಗ್ರಾಹಕ ಶಶಾಂಕ್ ಅವರ ಕಣ್ಣಿನ ಕೆಳ ಭಾಗದ ಮೂಳೆ ಮುರಿದಿದೆ. ಕಣ್ಣು ಮಂಜಾಗಿದ್ದು ದೃಷ್ಟಿ ಸ್ವಲ್ಪಮಟ್ಟಿಗೆ ಹಾನಿಯಾಗಿದೆ. ಇದೇ ಪರಿಸ್ಥಿತಿ ಇದ್ದಲ್ಲಿ ಅಪರೇಷನ್ ಮಾಡುವುದು ಅನಿವಾರ್ಯ ಎಂದು ವೈದ್ಯರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಹೆದ್ದಾರಿಯಲ್ಲೇ ನಿಂತು ಮಹಿಳೆಯೊಂದಿಗೆ ಕಾಮಕೃತ್ಯ ನಡೆಸಿದ ಬಿಜೆಪಿ ಮುಖಂಡ: ಸಿಸಿಟಿವಿ ದೃಶ್ಯ ವೈರಲ್; ಎಫ್‌ಐಆರ್
ಘಟನೆ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿಷ್ಣವರ್ಧನ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ಝೆಪ್ಟೋ ಕಂಪನಿಯ ವ್ಯವಸ್ಥಾಪಕರಿಗೆ ಶಶಾಂಕ್ ಕುಟುಂಬದವರು ದೂರು ನೀಡಿದ್ದಾಗ, ಉಡಾಫೆಯಿಂದ ವರ್ತಿಸಿರುವುದಾಗಿ ಆರೋಪಿಸಿದ್ದಾರೆ.