ಅಂಬೇಡ್ಕರ್ ಅವರು ಕೇವಲ ಸಾಮಾಜಿಕ ಪರಿವರ್ತನೆಗಾಗಿ, ಸಮಾನತೆಗಾಗಿ ಮಾತ್ರ ಶ್ರಮಿಸದೇ ವಿವಿಧ ಕ್ಷೇತ್ರಗಳಲ್ಲಿ ಆಳವಾದ ಸಂಶೋಧನೆ ಮಾಡಿ ಪ್ರಬಂಧಗಳನ್ನು ರಚಿಸಿದ್ದಾರೆ ಎಂದು ಸರಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲರಾದ ಡಾ.ಡಿ.ಇ.ಗಂಗಾಧರ್ ರಾವ್ ಹೇಳಿದರು.
ಕೋಲಾರ ನಗರದ ಮಹಿಳಾ ಸರಕಾರಿ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅರಿವೇ ಅಂಬೇಡ್ಕರ್ ಕೃತಿ ಹಾಗೂ ಇನ್ನಿತರ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅರ್ಥಶಾಸ್ತ್ರದಲ್ಲಿ ಅಂಬೇಡ್ಕರ್ ಬರೆದಿದ್ದ ರೂಪಾಯಿ ಸಮಸ್ಯೆ, ಅದರ ಮೂಲ ಮತ್ತು ಪರಿಹಾರ ಪ್ರಬಂಧವು ದೇಶದಲ್ಲಿ ಆರ್‌ಬಿಐ ಸ್ಥಾಪನೆಯಾಗಲು ಕಾರಣವಾಗಿತ್ತು. ಆದರೆ, ಬಹುತೇಕ ಅರ್ಥಶಾಸ್ತ್ರದ ವಿದ್ಯಾರ್ಥಿಗಳಿಗೆ ಈ ಮಾಹಿತಿಯೇ ಅರಿವಿಲ್ಲ ಎಂದು ವಿಷಾಧಿಸಿದರು.
ಕೆಯುಡಬ್ಲ್ಯೂಜೆ ಮಾಜಿ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಅಂಬೇಡ್ಕರ್ ಅವರ ಅಗಾಧವಾದ ಜ್ಞಾನ ಬಂಡಾರವನ್ನು ಅರಿತುಕೊಳ್ಳಲು ಅರಿವೇ ಅಂಬೇಡ್ಕರ್ ಪುಸ್ತಕವು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯ ರಘು ಕುಮಾರ್ ಮಾತನಾಡಿ, ಅಂಬೇಡ್ಕರ್ ಅವರು ನೂರು ವರ್ಷಗಳ ಹಿಂದೆಯೇ ದೇಶದ ಅರ್ಥ ವ್ಯವಸ್ಥೆ ಕುರಿತು ಆಳವಾದ ಅಧ್ಯಯನ ನಡೆಸಿದ್ದರು ಎನ್ನುವುದಕ್ಕೆ ಅವರ ರೂಪಾಯಿ ಸಮಸ್ಯೆ ಪ್ರಬಂಧವೇ ಸಾಕ್ಷಿ. ಅವರು ದೇಶಕ್ಕೆ ಬೇಕಿರುವುದು ರೂಪಾಯಿ ಪುನಶ್ಚೇತನ ಎಂದು ಸಲಹೆ ನೀಡಿದ್ದರು ಎಂದು ಹೇಳಿದರು.
ಇದೇ ವೇಳೆ ಕಾಲೇಜು ಪೀಠೋಪಕರಣ ದಾನಿಗಳಾದ ಸುಧಾಕರ್ ಹಾಗೂ ವನಿತಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶೇಖ್ ಜಮೀರ್ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.