ರಾಯಚೂರು ಜಿಲ್ಲೆಯ ವಸತಿಶಾಲೆ ಕಾರ್ಮಿಕರ ಬಾಕಿ ವೇತನ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಟಿಯುಸಿಐ ವತಿಯಿಂದ ರಾಯಚೂರು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
“ಕಳೆದ 15-20 ವರ್ಷಗಳಿಂದ ವಸತಿಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕಡಿಮೆ ವೇತನ ನೀಡಲಾಗುತ್ತಿದೆ. ಸೌಲಭ್ಯಗಳಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕ ಇಲಾಖೆ ತುಟ್ಟಿ ಭತ್ಯೆ ಹೆಚ್ಚುವರಿ ಕೆಲಸಕ್ಕೆ ಓಟಿ ನೀಡದೇ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದರು.
“ಕಾರ್ಮಿಕರಿಗೆ ನೀಡುವ ವೇತನವನ್ನೂ ಸರಿಯಾಗಿ ನೀಡಿಲ್ಲ. ಇದೀಗ ಕಳೆದ 5 ತಿಂಗಳ ಬಾಕಿ ವೇತನ ಪಾವತಿ ಮಾಡಿಲ್ಲ. ಜತೆಗೆ ಕಳೆದ 2017ರಿಂದ ಪ್ರತಿ ವರ್ಷ ಹೆಚ್ಚಳಗೊಂಡಿದ್ದ 7 ವರ್ಷಗಳ ಹಿಂಬಾಕಿ ವೇತನವನ್ನೂ ಪಾವತಿಸಿಲ್ಲ. ಕಾರ್ಮಿಕರಿಗೆ ಹಬ್ಬ ಹರಿದಿನಗಳಲ್ಲಿ ಇತರೆ ಕೆಲಸ ಕಾರ್ಯಕ್ಕಾಗಿ ರಜೆ ಪಡೆಯಲು ಸಾಧ್ಯವಾಗುತ್ತಿಲ್ಲ. ವಾರದ ರಜೆ ಮತ್ತು ಹಬ್ಬದ ದಿನಗಳಲ್ಲಿ ರಜೆ ನೀಡಬೇಕು” ಎಂದು ಒತ್ತಾಯಿಸಿದರು.
“ಕೆಲಸದ ಸಂದರ್ಭದಲ್ಲಿ ಹೆಚ್ಚುವರಿ ಕೆಲಸ ಮಾಡಿಸಿಕೊಳ್ಳುತ್ತಿದ್ದು, ಓಟಿ ವೇತನ ನೀಡುತ್ತಿಲ್ಲ. ಅದನ್ನು ಕೂಡಲೇ ನೀಡಬೇಕು. ಮಾಸಿಕ ವೇತನವನ್ನು ಮೊದಲ ವಾರದಲ್ಲಿ ಪಾವತಿಯಾಗುವಂತೆ ಕ್ರಮ ವಹಿಸಬೇಕು. ಪಿಎಫ್ ಮತ್ತು ಇಎಸ್ಐ ಸೌಲಭ್ಯ ಕಲ್ಪಿಸಬೇಕು. 15 ವರ್ಷದ ಸೇವಾ ಪ್ರಮಾಣ ಪತ್ರ ನೀಡಬೇಕು. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ವಿಧಿಸಿದ ಷರತ್ತುಗಳನ್ನು ರದ್ದು ಮಾಡಬೇಕು ಹಾಗೂ ನಿವೃತ್ತಿ ನಂತರ ಪಿಂಚಣಿ, ಇಡಿಗಂಟು ನೀಡಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ತುಮಕೂರಿಗೆ ಹೆಚ್ಚುವರಿ ರೈಲು ಸಂಚಾರಕ್ಕೆ ಆಗ್ರಹಿಸಿ ಕೇಂದ್ರ ಸಚಿವ ವಿ ಸೋಮಣ್ಣಗೆ ಮನವಿ
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಜಿ ಅಮರೇಶ, ಜಿಲ್ಲಾಧ್ಯಕ್ಷ ಹುಸೇನಪ್ಪ, ಲಾಳೆಸಾಬ್, ಶಿವರಾಜ ಆಲ್ಕೋಡ್, ಹುಸೇನಪ್ಪ ಸಿರವಾರ, ಹನುಮಂತ ಮಸ್ಕಿ, ಮಹಮ್ಮದ್ ಇಬ್ರಾಹಿಂ, ರಫಿ ಸಿಂಗನೋಡಿ, ರಂಗನಾಥ, ಕಮಲಮ್ಮ, ಸೋಮಣ್ಣ, ದೇವಮ್ಮ ಸೇರಿದಂತೆ ಬಹುತೇಕರು ಇದ್ದರು.
ವರದಿ : ಹಫೀಜುಲ್ಲ