ತವರು ಮನೆಗೆ ಹೋಗಿದ್ದಕ್ಕೆ ಸಿಟ್ಟಿಗೆದ್ದ ಮಗ ತಾಯಿಯನ್ನೇ ಬಡಿಗೆಯಿಂದ ಹೊಡೆದು ಕೊಲೆಗೈದಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ರಾಜೋಳ ಗ್ರಾಮದಲ್ಲಿ ನಡೆದಿದೆ.
ದೇವಕಮ್ಮ ದೊಡ್ಡಬೀರಪ್ಪ ಪೂಜಾರಿ (70) ಕೊಲೆಯಾದವರು, ಮಗ ಜಟ್ಟೆಪ್ಪ ದೊಡ್ಡಬೀರಪ್ಪ ಪೂಜಾರಿ ಕೊಲೆ ಆರೋಪಿ ಎಂದು ತಿಳಿದು ಬಂದಿದೆ.
ʼದೇವಕಮ್ಮ ಎರಡು ದಿನಗಳ ಹಿಂದೆ ಮಗಳ ಊರು ಲಕ್ಷ್ಮೀಪುರವಾಡಿಗೆ ಹೋಗಿ ಅ.18 ರಂದು ರಾಜೋಳ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಮಗ ಜಟ್ಟೆಪ್ಪ ಪೂಜಾರಿ ʼಊರಿಗೆ ಏಕೆ ಹೋಗಿದ್ದಿ, ನನಗೆ ಹೊಟ್ಟೆ, ಬಟ್ಟೆ ಯಾರು ನೋಡಬೇಕುʼ ಎಂದು ಕೋಪಿಸಿಕೊಂಡು ಬಡಿಗೆಯಿಂದ ತಾಯಿಗೆ ಹೊಡೆದಿದ್ದಾನೆ. ಭಯದಿಂದ ದೇವಕಮ್ಮ ಹೊರಗಡೆ ಓಡಿ ಹೋಗುವಾಗ ಬೆನ್ನಟ್ಟಿ ಕಟ್ಟಿಗೆಯಿಂದ ಹೊಡೆದು ಸಾಯಿಸಿದ್ದಾನೆ.
12 ವರ್ಷಗಳ ಹಿಂದೆ ಮದುವೆಯಾದ ಜಟ್ಟೆಪ್ಪ ಪೂಜಾರಿ ಪತ್ನಿಗೆ ದಿನಾಲೂ ಜಗಳವಾಡಿ ಕಿರುಕುಳ ನೀಡುತ್ತಿದ್ದ, ಹೀಗಾಗಿ ಪತ್ನಿ 4-5 ವರ್ಷಗಲಿಂದ ಮಕ್ಕಳನ್ನು ಕರೆದುಕೊಂಡು ತವರು ಗ್ರಾಮ ಹಂದರಕಿಯಲ್ಲಿ ವಾಸವಾಗಿದ್ದಾರೆ. ಆವಾಗಿನಿಂದ ಮನೆಯಲ್ಲಿ ಜಟೆಪ್ಪ ತಾಯಿ ದೇವಕಮ್ಮ ಜೊತೆಗೆ ವಾಸವಾಗಿದ್ದರು.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಇನ್ನೂ ಒಂದು ವಾರ ಮಳೆ ಅಬ್ಬರ; 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಈ ಸಂಬಂಧ ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್‍ಐ ಚಂದ್ರಾಮಪ್ಪ ನೇತ್ರತ್ವದ ತಂಡ ತನಿಖೆ ನಡೆಸಿ ಪ್ರಕರಣ ದಾಖಲಾದ 6 ಗಂಟೆಯೊಳಗೆ ಆರೋಪಿ ಜಟ್ಟೆಪ್ಪನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.