ಕಲೆ, ಸಾಹಿತ್ಯ, ಸಂಸ್ಕೃತಿ ಅನಾದಿ ಕಾಲದಿಂದಲೂ ಮಾನವರ ಬದುಕಿನ ಏಳಿಗೆಯ ಅವಿಭಾಜ್ಯ ಅಂಗವಾಗಿವೆ ಎಂದು ಬೀದರ ನೂತನ ನಗರ ಪೊಲೀಸ್ ಠಾಣೆಯ ಸಿಪಿಐ ವಿಜಯಕುಮಾರ ಬಾವಗಿ ಹೇಳಿದರು.
ಬೀದರ್ ನಗರದಲ್ಲಿ ಅಂಬಿಗರ ಚೌಡಯ್ಯ ಯುವ ಸೇನೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ 2020-21ನೇ ಸಾಲಿನ ಸಾಮಾನ್ಯ ಧನ ಸಹಾಯ ಯೋಜನೆಯಡಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ʼಯುವ ಸಮೂಹ ಕನ್ನಡ ಭಾಷೆ, ಸಾಹಿತ್ಯ ಬಗ್ಗೆ ಹೆಚ್ಚಿನ ಒಲವು ಬೆಳೆಸಿಕೊಳ್ಳಬೇಕು. ಯುವಕರಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವ ಕಾರ್ಯಕ್ರಮಗಳು ರೂಪಿಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯ ಶ್ಲಾಘನೀಯʼ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ ಮಾತನಾಡಿ, ʼಹೆಚ್ಚು ಪುಸ್ತಕ ಓದುವುದರಿಂದ ವಿದ್ಯಾರ್ಥಿಗಳಿಗೆ ಸಾಹಿತ್ಯದ ಆಸಕ್ತಿ ಮೂಡಲು ಸಾಧ್ಯವಿದೆ. ಪುಸ್ತಕ ಅಧ್ಯಯನದಿಂದ ಯುವ ಸಮುದಾಯ ಪ್ರಜ್ಞಾವಂತರಾಗುತ್ತಾರೆ. ದೇಶದ ಬಹುತ್ವ ಸಂಸ್ಕೃತಿ ಮರೆತು ಪಾಶ್ಚಾತ್ಯ ಕಡೆಗೆ ಮಾರುಹೋಗುತ್ತಿರುವುದು ಖೇದಕರ ಸಂಗತಿʼ ಎಂದು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ಜಾನಪದ ಅಕಾಡೆಮಿ ಸಹ ಸದಸ್ಯ ವಿಜಯಕುಮಾರ ಸೋನಾರೆ ಮಾತನಾಡಿ, ʼಗ್ರಾಮೀಣ ಪ್ರದೇಶದಲ್ಲಿ ನಶಿಸಿಹೋಗುತ್ತಿರುವ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿನೂತನ ಯೋಜನೆಗಳು ಜಾರಿಗೆ ತಂದಿದೆ. ನಗರ ಮತ್ತು ಗ್ರಾಮೀಣ ಭಾಗದ ಜಾನಪದ ಕಲಾವಿದರು ಇದರ ಲಾಭ ಪಡೆದುಕೊಳ್ಳಬೇಕುʼ ಎಂದು ಸಲಹೆ ನೀಡಿದರು.
ಜಾನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಅವರು ಭಾವಗೀತೆ ಗಾಯನ ನಡೆಸಿಕೊಟ್ಟರು. ಕು.ತ್ರಿಶಾ ಭರತ ನಾಟ್ಯ ಪ್ರದರ್ಶನ, ನರಸಿಂಹಲು ಡಪ್ಪುರ್ ಭಕ್ತಿ ಗೀತೆ, ಶಿವಕುಮಾರ ಪಾಂಚಾಳ ತಂಡದಿಂದ ವಚನ ಗಾಯನ, ದೀಲಿಪ್ ಕಾಡವಾದ ತಂಡದಿಂದ ಸುಗಮ ಸಂಗೀತ, ಶಂಕರ ಚೊಂಡಿ ತಂಡದಿಂದ ಹಂತಿ ಪದ ಹಾಗೂ ಯೇಸುದಾಸ್ ಅಲಿಯಂಬರ ಅವರಿಂದ ಗೊಂಬೆ ಕುಣಿತ, ದೇವದಾಸ ಚಿಮಕೋಡೆ ಅವರಿಂದ ಗೀಗಿಪದ, ಕಲ್ಲಮ್ಮ ಹಳ್ಳದಕೇರಿ ತಂಡದಿಂದ ಜೋಕುಮಾರ ಸ್ವಾಮಿ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದವರನ್ನು ಮನರಂಜಿಸಿದವು.
ಈ ಸುದ್ದಿ ಓದಿದ್ದೀರಾ? ಭಗತ್ ಸಿಂಗ್ ಯುವ ಜನಾಂಗದ ಕ್ರಾಂತಿಯ ಚಿಲುಮೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸುನೀಲ ಭಾವಿಕಟ್ಟಿ, ಎಸ್ಸಿ,ಎಸ್ಟಿ ಪತ್ರಿಕೆಗಳ ರಾಜ್ಯ ಮಟ್ಟದ ಸಲಹಾ ಸಮಿತಿ ಸದಸ್ಯ ಪೃಥ್ವಿರಾಜ್ ಎಸ್, ಅಲಿಯಂಬರ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಾಯಿ ಚೈತನ್ಯ ಸಂಜೀವಕುಮಾರ ಸೇರಿದಂತೆ ಪ್ರಮುಖರಾದ ಶ್ರೀಮಂತ ಸಪಾಟೆ, ಆನಂದ ಗುಪ್ತಾ, ಅನೀಲ ಮಚಕುರೆ ಇದ್ದರು. ಅಂಬಿಗರ ಚೌಡಯ್ಯ ಯುವ ಸೇನೆಯ ಜಿಲ್ಲಾಧ್ಯಕ್ಷ ಚಂದ್ರಕಾಂತ ಹಳ್ಳಿಖೇಡಕರ್ ಸ್ವಾಗತಿಸಿ, ನಿರೂಪಿಸಿದರು, ಅಂಬ್ರೀಷ ಮಲ್ಲೇಶಿ ವಂದಿಸಿದರು.