ಸರ್ಕಾರಿ ಪ್ರಥಮ ದರ್ಜೆ ಅತಿಥಿ ಉಪನ್ಯಾಸಕರಿಗೆ ಸೇವಾ ಕಾಯಂಗೊಳಿಸಬೇಕು. ಇಲ್ಲದಿದ್ದರೆ ಇದೇ ತಿಂಗಳು 23 ರಿಂದ ರಾಜ್ಯದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಹೋರಾಟವನ್ನು ಹಂತ ಹಂತವಾಗಿ ಹಮ್ಮಿಕೊಳ್ಳಲು ನಿರ್ಧರಿಸಿದೆ ಎಂದು ಜಿಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಸರ್ಕಾರಕ್ಕೆ ಎಚ್ಚರಿಸಿದೆ.
ಬೀದರ್ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಜಿಲ್ಲಾ ಘಟಕದ ಅತಿಥಿ ಉಪನ್ಯಾಸಕರು ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.
“ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಇಂದು ಬಹುತೇಕ ಅತಿಥಿ ಉಪನ್ಯಾಸಕರ ಕರ್ತವ್ಯಗಳನ್ನು ಅವಲಂಬಿಸಿದ್ದು, ಸುಮಾರು ಹತ್ತಾರು ವರ್ಷಗಳಿಂದ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ಅತಿಥಿ ಉಪನ್ಯಾಸಕರ ಬದುಕು ಅತಂತ್ರವಾಗಿದೆ. ಅತಿಥಿ ಎಂಬ ಅನಿಷ್ಟ ಪದ್ದತಿ ಅಂತ್ಯಗೊಳಿಸಿ ಸೇವಾ ಕಾಯಂಗೊಳಿಸಬೇಕು” ಎಂದು ಆಗ್ರಹಿಸಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಹಿಂದೆ ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗ ಅತಿಥಿ ಉಪನ್ಯಾಸಕರ ನಿಯೋಗವು ಕಳೆದ ಬೆಳಗಾವಿ ಅಧಿವೇಶನದ ಸಮಯದಲ್ಲಿ ಭೇಟಿಯಾಗಿ ಸಮಸ್ಯೆಗಳು ತಿಳಿಸಿದಾಗ ಅತಿಥಿ ಉಪನ್ಯಾಸಕರ ಸಮಸ್ಯೆ ಕುರಿತು ಅಂದು ಸದನದಲ್ಲಿ ದ್ವನಿ ಎತ್ತಿದ್ದರು. ನಮ್ಮ ಸರ್ಕಾರ ಆಡಳಿತಕ್ಕೆ ಬಂದರೆ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲಾಗುವುದು ಎಂದು ಭರವಸೆ ನೀಡಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಅತಿಥಿ ಉಪನ್ಯಾಸಕರನ್ನು ಸೇವಾ ಕಾಯಂ ನೀಡುತ್ತೆವೆಂದು ಭರವಸೆ ನೀಡಿದ್ದಾರೆ. ಅದರಂತೆ ಈಗ ಕಾಂಗ್ರೆಸ್ ಪಕ್ಷವು ಆಡಳಿತಕ್ಕೆ ಬಂದಿದ್ದು ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಸೇವಾ ಕಾಯಂಗೊಳಿಸಿ ನುಡಿದಂತೆ ನಡೆಯಬೇಕು” ಎಂದು ಒತ್ತಾಯಿಸಿದರು.
“ವಿಧಾನ ಪರಿಷತ್ತು ಸಭಾಪತಿ ಬಸವರಾಜ್ ಹೊರಟ್ಟಿಯವರು ಹಾಗೂ ರಾಜ್ಯದ ಎಲ್ಲಾ ವಿಧಾನ ಪರಿಷತ್ತು ಸದಸ್ಯರು ಅತಿಥಿ ಉಪನ್ಯಾಸಕರ ಸಮಸ್ಯೆಗಳ ಕುರಿತು ಬರುವ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಿ ಅತಿಥಿ ಉಪನ್ಯಾಸಕರಿಗೆ ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಸೇವಾ ಕಾಯಂಮಾತಿ ನೀಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು” ಎಂದು ಒತ್ತಾಯಿಸಿದರು
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದುಡಿವ ಜನರ ಮಹಾಧರಣಿ: ಶುರುವಾಗಲಿ ಜನಪರ್ಯಾಯ
ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಅನೀಲಕುಮಾರ ಸಿಂಧೆ ಅತಿಥಿ ಉಪನ್ಯಾಸಕರಾದ ಡಾ.ವೆಂಕಟ್ ಜಾಧವ್, ಚಂದ್ರಕಾಂತ್ ನಾರಾಯಣಪೇಟ, ಬಸವರಾಜ ಶೇರಿ, ಡಾ. ಧನರಾಜ್ ತುಡಮೆ, ಬೇಬಿ ಚಿದ್ರೆ, ಡಾ.ಗಂಗೂ ಗಾಯಿತ್ರಿ, ಡಾ.ಮಹೇಶ್ವರಿ ಹೇಡೆ, ವನಿತಾ ಬಾಂಗೆ, ಡಾ.ಬಂಡಯ್ಯ ಸ್ವಾಮಿ, ಡಾ.ಬಾಬುರಾವ ಚಿಮಕೊಡ್, ಡಾ.ಈಶ್ವರಯ್ಯ ಚೇತನ ಮಡಪತಿ, ನಿಕೇಷಕುಮಾರ, ಸಚಿನ್ ಕಟ್ಟಿಮನಿ, ತಿಪ್ಪಣ್ಣ ಸಿದ್ದರಾಮ ಏಕನಾಥ ಅಶೋಕ ಪ್ರಭು ಡಾ.ರಮೇಶ ಚಂದ್ರಕಾಂತ ಸೇರಿದಂತೆ ಎಲ್ಲಾ ತಾಲೂಕಿನ ಅತಿಥಿ ಉಪನ್ಯಾಸಕರು ಇದ್ದರು.