ಬೀದರ್ ನಗರದಲ್ಲಿ ನಿನ್ನೆ (ಜ.16) ಎಸ್‌ಬಿಐ ಎಟಿಎಂ ದರೋಡೆ ಪ್ರಕರಣದ ಇಬ್ಬರು ಆರೋಪಿಗಳ ಗುರುತು ಪತ್ತೆಯಾಗಿದ್ದು, ಇಬ್ಬರನ್ನು ಬಂಧಿಸಲು ಈಗಾಗಲೇ ಎಂಟು ಪೊಲೀಸರ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ರಾಜ್ಯ ಅಪರಾಧ ವಿಭಾಗದ ಎಡಿಜಿಪಿ ಪಿ.ಹರಿ ಶೇಖರನ್ ತಿಳಿಸಿದರು.
ನಗರದ ಛತ್ರಪತಿ ಶಿವಾಜಿ ವೃತ್ತದಲ್ಲಿರುವ ನಿನ್ನೆ ನಡೆದಿರುವ ಘಟನಾ ಸ್ಥಳಕ್ಕೆ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ʼಈ ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಈ ಹಿಂದೆ ಹಲವು ಅಪರಾಧ ಪ್ರಕರಣಗಳಲ್ಲಿ ಶಾಮೀಲಾಗಿರುವ ಮಾಹಿತಿ ಲಭ್ಯವಾಗಿದೆ. ಘಟನೆ ಸಂಬಂಧಿಸಿದಂತೆ ಮಹಾರಾಷ್ಟ್ರ ಹಾಗೂ ತೆಲಂಗಾಣ ಪೊಲೀಸರು ಉತ್ತಮ ಸಹಕಾರ ನೀಡುತ್ತಿದ್ದಾರೆ. ನಮ್ಮ ಅಪರಾಧ ತಂಡ ಹಾಗೂ ಸೆಲ್ ಫೋನ್ ಅನಾಲಿಸಿಸ್ ತಂಡಗಳು ಒಗ್ಗೂಡಿ ಕೆಲಸ ಮಾಡಿವೆʼ ಎಂದು ಮಾಹಿತಿ ನೀಡಿದರು.
ಇಬ್ಬರು ಆರೋಪಿಗಳು ಹೈದರಾಬಾದ್ ಮೂಲಕ ಬೇರೆಡೆಗೆ ಹೋಗಲು ಟಿಕೆಟ್ ಬುಕ್ ಮಾಡಿದ್ದರು. ನಮ್ಮ ಪೊಲೀಸರು ಟ್ರಾವೆಲ್ಸ್ ಬಳಿಗೆ ತೆರಳಿದ್ದರು. ವಿಷಯ ತಿಳಿದ ನಂತರ ಟ್ರಾವೆಲ್ಸ್ ವ್ಯವಸ್ಥಾಪಕನ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎಂದು ವಿವರಿಸಿದರು.
ಹೈದರಾಬಾದ್ ಪೊಲೀಸರು ಸೇರಿಕೊಂಡು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಈ ಪ್ರಕರಣದ ಆರೋಪಿಗಳನ್ನು ಮೊದಲು ಬಂಧಿಸಿ ಬಳಿಕ ಇತರೆ ವಿಷಯಗಳ ಕುರಿತು ತನಿಖೆ ನಡೆಸುತ್ತೇವೆ ಎಂದು ಹೇಳಿದರು
₹83 ಲಕ್ಷ ದೋಚಿಕೊಂಡ ಹೋದ ಖದೀಮರು :
ಬೀದರ್‌ನಲ್ಲಿ ನಡೆದ ಎಸ್‌ಬಿಐ ಬ್ಯಾಂಕ್ ದರೋಡೆ ನಡೆದ ದಾಳಿಯಲ್ಲಿ ಗಿರಿ ವೆಂಕಟೇಶ್ ಎಂಬ ಭದ್ರತಾ ಸಿಬ್ಬಂದಿ ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದು, ಲಾಡಗೇರಿಯ ಶಿವಕುಮಾರ್ ಎಂಬುವರು ಗಂಭೀರವಾಗಿ ಗಾಯಗೊಂಡು ಹೈದರಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬ್ಯಾಂಕ್‌ನ ಒಟ್ಟು ₹87 ಲಕ್ಷ ದರೋಡೆಯಾಗಿದೆ. ಅದರಲ್ಲಿನ ₹4 ಲಕ್ಷ ದರೋಡೆ ಮಾಡಿಕೊಂಡು ತೆರಳುವ ವೇಳೆ ಕೆಳಗಡೆ ಬಿದ್ದಿದ್ದು, ಕೆಳಗೆ ಬಿದ್ದ ಆ ಹಣವನ್ನು ಸತೀಶ್ ಎಂಬ ವ್ಯಕ್ತಿ ನಮಗೆ ತಲುಪಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಸಚಿವದ್ವಯರ ಭೇಟಿ :
ಬೀದರ್‌ನಲ್ಲಿ ಗುರುವಾರ ಬೆಳಿಗ್ಗೆ 10:55 ಗಂಟೆ ಸುಮಾರಿಗೆ ನಗರದ ಹೃದಯಭಾಗದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಪಕ್ಕದ ಎಸ್‌ಬಿಐ ಬ್ಯಾಂಕ್ ಸಮೀಪ ಸಿನೀಮಯ ರೀತಿಯಲ್ಲಿ ಗುಂಡಿನ ದಾಳಿ ನಡೆಸಿ, ಓರ್ವನನ್ನು ಕೊಲೆಗೈದು ಹಣ ದರೋಡೆ ನಡೆದ ಘಟನೆಯಿಂದ ಬೀದರ್ ಜನ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ.
ಇಂತಹ ಘಟನೆ ಬಹುಶಃ ರಾಜ್ಯದಲ್ಲೇ ಮೊದಲ ಇರಬಹುದು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಘಟನಾ ಸ್ಥಳಕ್ಕೆ ಇಂದು ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಶೀಲಿಸಿ, ಘಟನೆಗೆ ಸಂಬಂಧಿಸಿದಂತೆ ತನಿಖೆಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ʼಸರ್ಕಾರ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದ್ದು, ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು’ ಎಂದರು.
ಘಟನೆಯಲ್ಲಿ ಗಂಭೀರ ಗಾಯಗೊಂಡು ಹೈದರಾಬಾದ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ನಿನ್ನೆ ರಾತ್ರಿ ಭೇಟಿ ನೀಡಿ ಸಿಬ್ಬಂದಿ ಶಿವಕುಮಾರ್ ಅವರ ಆರೋಗ್ಯ ವಿಚಾರಿಸಿದ್ದೇನೆ. ಈಗಾಗಲೇ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅವರ ಚಿಕಿತ್ಸೆಯ ಸಂಪೂರ್ಣ ವೆಚ್ಚ ಸರ್ಕಾರ ಭರಿಸುತ್ತದೆ ಎಂದು ಭರವಸೆ ನೀಡಿದರು.
ಗುಂಡೇಟಿಗೆ ಬಲಿಯಾದ ಕುಟುಂಬಕ್ಕೆ ₹18 ಲಕ್ಷ ಪರಿಹಾರ, ನೌಕರಿ:
ಬ್ಯಾಂಕ್ ದರೋಡೆ ವೇಳೆ ದರೋಡೆಕೋರರ ಗುಂಡೇಟಿಗೆ ಬಲಿಯಾದ ಚಿಟಗುಪ್ಪ ತಾಲ್ಲೂಕಿನ ಬೇಮಳಖೇಡ ಗ್ರಾಮದ ಗಿರಿ ವೆಂಕಟೇಶ ಎಂಬುವವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
‘ಸರಕಾರದ ಬ್ಯಾಂಕ್ ಹಣವನ್ನು ಕಾಪಾಡುವ ನಿಟ್ಟಿನಲ್ಲಿ ಬಲಿಯಾದ ಗಿರಿ ವೆಂಕಟೇಶ ಕುಟುಂಬಕ್ಕೆ ಸರಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ದೊರಕಬೇಕಾದ ಎಲ್ಲ ಸಹಾಯ ಸವಲತ್ತುಗಳನ್ನು ದೊರಕಿಸಿಕೊಡಲಾಗುವುದುʼ ಎಂದು ಭರವಸೆ ನೀಡಿದರು.

ʼಮುಖ್ಯಮಂತ್ರಿಗಳೊಂದಿಗೆ ಈಗಾಗಲೇ ಚರ್ಚಿಸಲಾಗಿದ್ದು, ಮೃತ ಗಿರಿ ವೆಂಕಟೇಶ ಕುಟುಂಬಕ್ಕೆ ಹೆಚ್ಚುವರಿಯಾಗಿ ₹10 ಲಕ್ಷ ದೊರಕಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಸಮಾಜ ಕಲ್ಯಾಣ ಇಲಾಖೆಯಿಂದ ₹8 ಲಕ್ಷ ಪರಿಹಾರ ಹಾಗೂ ಅವರ ತಾಯಿಗೆ ₹5 ಸಾವಿರ ಮಾಸಾಶನ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸಮಾಜ ಕಲ್ಯಾಣ ಇಲಾಖೆಯಡಿ ಹೊರಗುತ್ತಿಗೆ ಆಧಾರದಲ್ಲಿ ನೌಕರಿ ನೀಡಲಾಗುವುದುʼ ಎಂದು ಸಚಿವರು ತಿಳಿಸಿದರು.
ಈಗಾಗಲೇ ಹೈದರಾಬಾದ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಕುಮಾರ ಅವರ ಚಿಕಿತ್ಸೆ ವೆಚ್ಚ ಭರಿಸಲು ಸಹ ಕ್ರಮ ಕೈಗೊಳ್ಳಲಾಗುವುದು. ಸಮಾಜ ಕಲ್ಯಾಣ ಇಲಾಖೆಯಿಂದ ದೊರಬೇಕಾದ ಪರಿಹಾರ ಸಹಾಯಗಳನ್ನು ತಕ್ಷಣವೇ ಒದಗಿಸುವಂತೆ ಸ್ಥಳದಲ್ಲೇ ಉಪಸ್ಥಿತರಿದ್ದ ಉಪ ನಿರ್ದೇಶಕರಿಗೆ ಸೂಚಿಸಿದರು.
ಎಸ್‌ಬಿಐ ಮ್ಯಾನೇಜರ್, ಸಿಎಂಎಸ್ ಮುಖ್ಯಸ್ಥ ವಿರುದ್ಧ ಪ್ರಕರಣ ದಾಖಲು:
ಘಟನೆ ಸಂಬಂಧ ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕ, ಸಿಎಂಎಸ್ ಕಂಪನಿ ಮುಖ್ಯಸ್ಥ ಹಾಗೂ ಇಬ್ಬರು ಅಪರಿಚಿತರ ವಿರುದ್ಧ ಮೃತ ಗಿರಿ ವೆಂಕಟೇಶ್ ಅವರ ಸಹೋದರ ನೀಡಿದ ದೂರಿನ ಮೇರೆಗೆ ನಗರದ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ಉಸ್ತುವಾರಿ ಸಚಿವರು ರಾಜೀನಾಮೆ ನೀಡಲಿ :
ಬೀದರ್ ಜಿಲ್ಲೆಯಲ್ಲಿ ಹಾಡುಹಗಲೇ ಕೊಲೆ, ಎಟಿಎಂ ದರೋಡೆ ನಡೆಯುತ್ತಿರುವುದನ್ನು ಗಮನಿಸಿದರೆ ಆಡಳಿತ ವ್ಯವಸ್ಥೆ ಸತ್ತು ಹೋಗಿದೆ ಎಂದೆನಿಸುತ್ತಿದೆ. ಕೂಡಲೇ ಉಸ್ತುವಾರಿ ಸಚಿವರು ಇದರ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಭಗವಂತ ಖೂಬಾ ಆಗ್ರಹಿಸಿದ್ದಾರೆ.
ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತು ಮೃತ ಸಿಬ್ಬಂದಿ ಕುಟುಂಬಕ್ಕೆ ₹1 ಕೋಟಿ ಪರಿಹಾರ ಮತ್ತು ಗಾಯಗೊಂಡ ಸಿಬ್ಬಂದಿಗೆ ಅಗತ್ಯ ಚಿಕಿತ್ಸೆ ಮತ್ತು ₹50 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಮಾತನಾಡಿ, ‘ನಗರದಲ್ಲಿ ಹಾಡುಹಗಲೇ ಎಟಿಎಂ ಹಣ ದರೋಡೆ ನಡೆಸಿ, ಓರ್ವ ವ್ಯಕ್ತಿಯನ್ನು ಕೊಲೆಗೈದು ಪರಾರಿಯಾಗಿದ್ದು ನಿಜಕ್ಕೂ ಜಿಲ್ಲೆಯ ಜನ ಬೆಚ್ಚಿಬೀಳುವ ಘಟನೆ. ರಾಜ್ಯದಲ್ಲಿ ಗೃಹಸಚಿವರು ಇದ್ದಾರೋ, ಇಲ್ಲವೋ ಎಂಬುದು ಅನುಮಾನದಿಂದ ನೋಡುವಂತಾಗಿದೆ. ಗೃಹ ಇಲಾಖೆ ರಾಜ್ಯದಲ್ಲಿ ಸಂಪೂರ್ಣ ವಿಫಲವಾಗಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆʼ ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಬೆಚ್ಚಿ ಬೀಳಿಸಿದ ಬೀದರ್ ಎಟಿಎಂ ದರೋಡೆ ಪ್ರಕರಣ: ಪಾತಕಿಗಳಲ್ಲಿ ‘ಉತ್ತರ ಭಾರತ ಮಾದರಿ’ ವಾಸನೆ!
ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ʼನಮ್ಮ ಕ್ಷೇತ್ರದಲ್ಲಿ ಬರುವ ಚಿದ್ರಿಯ ಗಿರಿ ವೆಂಕಟೇಶ್ ಹತ್ಯೆಯಾಗಿದ್ದು ನಿಜಕ್ಕೂ ಖಂಡನೀಯ. ಮೃತರ ಕುಟುಂಬಕ್ಕೆ ಸರ್ಕಾರ 1 ಕೋಟಿ ರೂ. ಪರಿಹಾರ ನೀಡಬೇಕು. ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡಿ ಸರ್ಕಾರದಿಂದ ಖಾಯಂ ಮಾಡಬೇಕುʼ ಎಂದು ಆಗ್ರಹಿಸಿದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.