ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಮತ್ತು ಇತ್ತೀಚೆಗೆ ಮರಾಠಿ ಮಾತನಾಡಲಿಲ್ಲವೆಂಬ ಕಾರಣಕ್ಕೆ ಸರ್ಕಾರಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ವಿವಿಧ ಕನ್ನಡ ಸಂಘಟನೆಗಳ ಒಕ್ಕೂಟ ಮಾರ್ಚ್ 22ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿದೆ.
ಬಂದ್‌ಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲು ಬೆಂಗಳೂರು ನಗರದಲ್ಲಿ ಶುಕ್ರವಾರ ಒಕ್ಕೂಟದ ಸಭೆ ನಡೆಸಿದ್ದು, “ಕರ್ನಾಟಕದಲ್ಲಿ ಮರಾಠಿ ಏಕೀಕರಣ ಸಮಿತಿಯನ್ನು ನಿಷೇಧಿಸಬೇಕು ಮತ್ತು ಶಿವಸೇನೆ ಸದಸ್ಯರನ್ನು ರಾಜ್ಯಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಬೇಕು” ಎಂದು ಒತ್ತಾಯಿಸಿದ್ದಾರೆ. ಜತೆಗೆ ಮಾರ್ಚ್ ಪೂರ್ತಿ ಅನೇಕ ಪ್ರತಿಭಟನೆಗಳನ್ನು ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.
“ಮಾರ್ಚ್ 22ರಂದು ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಕರ್ನಾಟಕದಲ್ಲಿ ರಾಜ್ಯವ್ಯಾಪಿ ಬಂದ್ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಬೇಕು” ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಎಲ್ಲ ಸಂಘಟನೆಗಳು ಮತ್ತು ಮುಖಂಡರಿಗೆ ಮನವಿ ಮಾಡಿದರು.
“ನಾವು ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಶಾಪಿಂಗ್ ಮಾಲ್‌ಗಳೊಂದಿಗೆ ಮಾತನಾಡಿದ್ದೇವೆ. ಅವುಗಳು ಮುಚ್ಚಲ್ಪಡುತ್ತವೆ. ಸರ್ಕಾರಿ ನೌಕರರ ಸಂಘವು ಬಂದ್‌ಗೆ ಬೆಂಬಲ ನೀಡಬೇಕು. ಖಾಸಗಿ ಮತ್ತು ಸರ್ಕಾರಿ ಶಾಲೆಗಳು ರಜೆ ಘೋಷಿಸಬೇಕು. ಎಲ್ಲ ಐಟಿ ಕಂಪೆನಿಗಳು ಉದ್ಯೋಗಿಗಳಿಗೆ ರಜೆ ನೀಡಬೇಕು. ಎಲ್ಲ ಅಂಗಡಿಗಳು ಮತ್ತು ವ್ಯವಹಾರಗಳನ್ನು ಸ್ಥಗಿತಗೊಳಿಸಬೇಕು. ವ್ಯಾಪಾರ ಮತ್ತು ವಾಣಿಜ್ಯವನ್ನು ನಿಲ್ಲಿಸಬೇಕು” ಎಂದು ವಾಟಾಳ್ ನಾಗರಾಜ್ ಕರೆ ನೀಡಿದರು.
“ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಕರ್ನಾಟಕ-ತಮಿಳುನಾಡು ಗಡಿ ತಡೆದು ಅತ್ತಿಬೆಲೆಯಲ್ಲಿ ಪ್ರತಿಭಟನೆ ನಡೆಸಲು ಯೋಜಿಸಲಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಶಾಪಿಂಗ್ ಮಳಿಗೆಯಲ್ಲಿ ಕನ್ನಡ ಕಡೆಗಣನೆ; ಕನ್ನಡಪರ ಸಂಘಟನೆಗಳ ಕಿಡಿ.
ಟಿ ಎ ನಾರಾಯಣಗೌಡ ಮತ್ತು ಪ್ರವೀಣ್ ಶೆಟ್ಟಿ ನೇತೃತ್ವದ ಎರಡೂ ಬಣಗಳಾದ ಕರ್ನಾಟಕ ರಕ್ಷಣಾ ವೇದಿಕೆಯಂತಹ ಕನ್ನಡ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ.
ಪ್ರತಿಭಟನೆ ನಡೆಯುವ ದಿನ ಮತ್ತು ಸ್ಥಳಗಳು
ಮಾರ್ಚ್ 3: ರಾಜಭವನಕ್ಕೆ ಮುತ್ತಿಗೆ
ಮಾರ್ಚ್ 7: ಬೆಳಗಾವಿ ಚಲೋ
ಮಾರ್ಚ್ 11: ಅತ್ತಿಬೆಲೆಯಲ್ಲಿ ಕರ್ನಾಟಕ-ತಮಿಳುನಾಡು ಗಡಿ ಬಂದ್
ಮಾರ್ಚ್ 14: ಮಂಡ್ಯ, ಮೈಸೂರು, ರಾಮನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
ಮಾ.16: ಹೊಸಕೋಟೆ ಟೋಲ್ ರಾಷ್ಟ್ರೀಯ ಹೆದ್ದಾರಿ ಬಂದ್
ಮಾರ್ಚ್ 22: ಕರ್ನಾಟಕ ಬಂದ್ ಪ್ರತಿಭಟನೆಗಳು ನಡೆಯಲಿವೆ ಎಂದು ಸಭೆಯಲ್ಲಿ ತೀರ್ಮಾನಿಸಿದ್ದಾರೆ.