ಬೀದರ್ ಜಿಲ್ಲೆಯಲ್ಲಿ ಇಲ್ಲಿಯವರೆಗೆ ದಲಿತರ ಮೇಲೆ ಅನೇಕ ದೌರ್ಜನ್ಯ ಪ್ರಕರಣಗಳು ನಡೆದರೂ ಯಾವುದೇ ಕ್ರಮಕೈಗೊಳ್ಳದೆ ಜಿಲ್ಲಾಡಳಿತ ದಿವ್ಯ ಮೌನ ವಹಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ನಿಷ್ಕಾ ಳಜಿಯಿಂದ ಜಿಲ್ಲಾಡಳಿತ ನಿಷ್ಕ್ರೀಯಗೊಂಡಿದೆ ಎಂದು ಜನರ ಧ್ವನಿ ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಅಂಕುಶ ಗೋಖಲೆ ಆರೋಪಿಸಿದರು.
ಬೀದರ್ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ʼಬೀದರ್ ಜಿಲ್ಲೆಯಲ್ಲಿ ಅಟ್ರಾಸಿಟಿ ಕೇಸ್‍ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಮರಕುಂಬಿ ಗ್ರಾಮದಲ್ಲಿ 98 ಜನರ ಮೇಲೆ ಅಟ್ರಾಸಿಟಿ ಕೇಸ್ ದಾಖಲಾಗಿ ಅವರೆಲ್ಲರಿಗೆ ಜೀವಾವಧಿ ಶಿಕ್ಷೆಯಾಗಿದೆ. ಆದರೆ, ಬೀದರ್ ಜಿಲ್ಲೆಯಲ್ಲಿ ಪರಿಶಿಷ್ಟರ ಮೇಲೆ ಅನೇಕ ದೌರ್ಜನ್ಯ ಪ್ರಕರಣಗಳು ನಡೆದರೂ ಸಹ ಯಾವುದೇ ಕ್ರಮ ಕೈಗೊಳ್ಳದೆ ಜಿಲ್ಲಾಡಳಿತ ದಿವ್ಯ ಮೌನ ವಹಿಸಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
2023ರ ಏಪ್ರಿಲ್‌ನಲ್ಲಿ ಭಾಲ್ಕಿ ತಾಲ್ಲೂಕಿನ ಮಳಚಾಪೂರ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ನಡೆಯುವ ಸಂದರ್ಭದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯಿತು. ಆದರೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೌರ್ಜನ್ಯ ಎಸಗಿದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. 2024ರ ಆಗಸ್ಟ್ 21 ರಂದು ಭಾಲ್ಕಿ ತಳವಾಡ (ಕೆ) ಗ್ರಾಮದಲ್ಲಿ ಸವರ್ಣಿಯ ಮಹಿಳೆ ಪರಿಶಿಷ್ಟ ವ್ಯಕ್ತಿಗೆ ಜಾತಿ ನಿಂದನೆ ಮಾಡಿದ್ದಾಳೆ. 2024ರ ಸೆಪ್ಟೆಂಬರ್ 27ರಂದು ಭಾಲ್ಕಿ ತಾಲ್ಲೂಕಿನ ರಾಚಪ್ಪ ಗೌಡಗಾಂವ ಗ್ರಾಮದಲ್ಲಿ ಪರಿಶಿಷ್ಟ ಮಹಿಳೆಯ ಮೇಲೆ ಅಲ್ಲಿನ ಯುವಕರು ಹಲ್ಲೆ ಮಾಡಿದ್ದು, ಭಾಲ್ಕಿ ತಾಲ್ಲೂಕಿನ ಮರೂರ ಗ್ರಾಮದಲ್ಲಿ 13 ಜನ ಸವರ್ಣಿಯರು ಪರಿಶಿಷ್ಟರ ಜಮೀನನ್ನು ಕಬಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಚಳಕಾಪೂರ ಗ್ರಾಮದಲ್ಲಿ ಸವರ್ಣಿಯರು ಪರಿಶಿಷ್ಟರ ಓಣಿಗಳಿಗೆ ನುಗ್ಗಿ ಹಲ್ಲೆ ಮಾಡಿರುವ ಅಮಾನುಷ ಘಟನೆ ನಡೆದಿದೆ. ಈ ಎಲ್ಲ ಘಟನೆಗಳು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ತವರು ಕ್ಷೇತ್ರದಲ್ಲಿ ಸಂಭವಿಸಿವೆ. ಈ 5 ಘಟನೆಗಳಲ್ಲಿ ಯಾರೊಬ್ಬರಿಗೂ ಸಹ ಅಟ್ರಾಸಿಟಿ ಕೇಸ್ ಅಡಿ ಶಿಕ್ಷೆಯಾಗದೇ ಇರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು.
ಇಷ್ಟು ಘಟನೆಗಳು ಸಂಭವಿಸಿದರೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಸಂತ್ರಸ್ತರ ಮನೆಗಳಿಗೆ ಹೋಗಿ ಸಾಂತ್ವನ ಹೇಳದಿರುವುದು ವಿಪರ್ಯಾಸ. ದೌರ್ಜನ್ಯಕ್ಕೆ ಒಳಗಾದವರನ್ನು ಸಚಿವರು ಅವರ ಮನೆಗೆ ಕರೆಸಿಕೊಂಡು ಸಮಾಧಾನ ಪಡಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದರು.
ಈ ಎಲ್ಲ ಘಟನೆಗಳಲ್ಲಿ ಅಟ್ರಾಸಿಟಿ ಕೇಸ್ ಆಗದಂತೆ ಸಂಚು ರೂಪಿಸಿರುವ ಜಿಲ್ಲಾ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಹಾಗೂ ಭಾಲ್ಕಿ ಡಿವೈಎಸ್‍ಪಿ ಅವರೇ ನೇರ ಹೊಣೆ. ಈ ಇಬ್ಬರನ್ನು 15 ದಿವಸಗಳ ಒಳಗೆ ಇಲ್ಲಿಂದ ವರ್ಗಾವಣೆ ಮಾಡದಿದ್ದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಜಿಲ್ಲೆಯ ʼಬಿಳಿ ಬಂಗಾರʼ ಬೆಳೆಗಾರರಿಗೆ ಸಿಗದ ಪ್ರೋತ್ಸಾಹ : ಹೊರ ರಾಜ್ಯಕ್ಕೆ ಹತ್ತಿ ಮಾರಾಟ!
ಈ ಸಂದರ್ಭದಲ್ಲಿ ಜನರ ಧ್ವನಿ ಸಂಘಟನೆ ಜಿಲ್ಲಾ ಅಧ್ಯಕ್ಷ ರಾಜಕುಮಾರ ಶಿಂಧೆ, ಪ್ರಮುಖರಾದ ತಿಪ್ಪಣ್ಣ ವಾಲಿ, ಮಾರುತಿ ಕಾಂಬಳೆ, ರವಿ ಕೋಟೇರ್, ದತ್ತಾತ್ರಿ ನಾಗವಂಶಿ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.