ಧರ್ಮಸ್ಥಳದ ಸೌಜನ್ಯ ಮನೆಯ ಸಮೀಪ ಬಿಗ್ಬಾಸ್ನ ರಜತ್ ಎಂಬುವವರ ಸಂದರ್ಶನ ಮಾಡುತ್ತಿದ್ದ ನಾಲ್ಕು ಮಂದಿ ಯೂಟ್ಯೂಬ್ ಮಾಧ್ಯಮದವರ ಮೇಲೆ ಧರ್ಮಸ್ಥಳದ ಕೆಲವು ಗೂಂಡಾಗಳು ದಾಳಿ ಮಾಡಿ, ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆಯನ್ನು ಡಿಜಿಟಲ್ ಮೀಡಿಯಾ ಫಾರ್ ಡೆಮಾಕ್ರಸಿ ಖಂಡಿಸಿದ್ದು, ಪೊಲೀಸರು ಕೂಡಲೇ ಪ್ರವೃತ್ತರಾಗಿ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿದೆ.
ಕುಡ್ಲ ರ್ಯಾಂಪೇಜ್ ಎಂಬ ಹೆಸರಿನ ಯೂಟ್ಯೂಬರ್ ಆಗಿರುವ ಅಜಯ್ ಅಂಚನ್ ಸೇರಿ ನಾಲ್ವರು ಯೂಟ್ಯೂಬರ್ಗಳ ಮೇಲೆ ಸೌಜನ್ಯ ಮನೆಯ ಸಮೀಪ ವರದಿ ಮಾಡಲು ತೆರಳಿದ್ದಾಗ ಇಂದು ಧರ್ಮಸ್ಥಳದ ಬೆಂಬಲಿಗರು ದಾಳಿ ಮಾಡಿ ಹೊಡೆದಿದ್ದಾರೆ. ಅಜಯ್ ಅಂಚನ್ ಅವರ ಜೊತೆಗೆ, ಯುನೈಟೆಡ್ ಮೀಡಿಯಾದ ಅಭಿಷೇಕ್, ಸಂಚಾರಿ ಸ್ಟುಡಿಯೋದ ವಿಜಯ್ ಮತ್ತು ಕುಡ್ಲಾ ರಾಂಪೇಜ್ನ ಕ್ಯಾಮೆರಾ ಪರ್ಸನ್ ಮೇಲೆ ದಾಳಿ ಮಾಡಲಾಗಿದೆ. ಕ್ಯಾಮೆರಾವನ್ನು ಪುಡಿ ಮಾಡಿದ್ದಾರೆ ಮತ್ತು ಎಲ್ಲರೂ ಈ ಸದ್ಯ ಆಸ್ಪತ್ರೆಗೆ ದಾಖಲಾಗಿದ್ದು ಒಬ್ಬರಿಗೆ ತೀವ್ರ ಗಾಯಗಳಾಗಿವೆ. ಈ ಘಟನೆಯನ್ನು ಕರ್ನಾಟಕದ ಡಿಜಿಟಲ್ ಮಾಧ್ಯಮಗಳ ವೇದಿಕೆಯಾದ ಡಿಜಿಟಲ್ ಮೀಡಿಯಾ ಫಾರ್ ಡೆಮಾಕ್ರಸಿ ಈ ಘೋರ ಕೃತ್ಯವನ್ನು ಖಂಡಿಸುತ್ತದೆ ಮತ್ತು ದಾಳಿ ಮಾಡಿದ ಗೂಂಡಾಗಳ ವಿರುದ್ಧ ತಕ್ಷಣದ ಕ್ರಮ ಕೈಗೊಳ್ಳಬೇಕು. ಪೊಲೀಸರು ಕೂಡಲೇ ಕಾರ್ಯ ಪ್ರವೃತ್ತರಾಗಿ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದೆ.
ಇತ್ತೀಚೆಗೆ ಕರ್ನಾಟಕದ ಗೌರವಾನ್ವಿತ ಹೈಕೋರ್ಟ್ ಎರಡು ಪ್ರಕರಣಗಳಲ್ಲಿ ಅಜಯ್ ಅಂಚನ್ ಅವರ ಮೇಲಿನ ನಿರ್ಬಂಧವನ್ನು ತೆಗೆದುಹಾಕಿರುವುದು ಗಮನಾರ್ಹವಾಗಿದೆ. ಕರ್ನಾಟಕ ಸರ್ಕಾರವು ಮಾಧ್ಯಮ ಸಂಸ್ಥೆಗಳ ಮತ್ತು ಪತ್ರಕರ್ತರ ಪ್ರಜಾಪ್ರಭುತ್ವದ ಹಕ್ಕುಗಳ ಪರವಾಗಿ ನಿಲ್ಲುವುದರ ಜೊತೆಗೆ, ವಿಶೇಷವಾಗಿ ಧರ್ಮಸ್ಥಳದ ಸುತ್ತಮುತ್ತಲಿನ ಆರೋಪಿತ ಅಪರಾಧಗಳನ್ನು ಬಯಲಿಗೆಳೆಯುವಲ್ಲಿ ಮುಂಚೂಣಿಯಲ್ಲಿರುವ ಡಿಜಿಟಲ್ ಮಾಧ್ಯಮಗಳನ್ನು ಹಕ್ಕುಗಳನ್ನು ಕಾಪಾಡುವ ಹೊಣೆ ಹೊರುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಡಿಜಿಟಲ್ ಮೀಡಿಯಾ ಫಾರ್ ಡೆಮಾಕ್ರಸಿ ತಿಳಿಸಿದೆ.
ಇದನ್ನು ಓದಿದ್ದೀರಾ? ಧರ್ಮಸ್ಥಳದಲ್ಲಿ ಗೂಂಡಾಗಿರಿ: ನಾಲ್ವರು ಯೂಟ್ಯೂಬರ್ ಗಳ ಮೇಲೆ ಮಾರಣಾಂತಿಕ ಹಲ್ಲೆ
ಕರ್ನಾಟಕದ ಜನತೆ ಈ ಗೂಂಡಾಗಿರಿಯನ್ನು ಖಂಡಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ನಿಲ್ಲಬೇಕೆಂದು ಮನವಿ ಮಾಡುವುದಾಗಿ ಡಿಜಿಟಲ್ ಮೀಡಿಯಾ ಫಾರ್ ಡೆಮಾಕ್ರಸಿ ತಿಳಿಸಿದೆ.
