ಕ್ರಿಮಿನಲ್ ತಿದ್ದುಪಡಿ ಕಾಯ್ದೆ ವಾಪಾಸಾತಿಗಾಗಿ ಆಗ್ರಹ ಮತ್ತು ದೇಶದಾದ್ಯಂತ ಮುಸ್ಲಿಂ ಅಲ್ಪಸಂಖ್ಯಾತರ ಮೇಲಿನ ಮತಾಂಧ ದಾಳಿಗಳ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿ ಸಿಪಿಐ(ಎಂ) ಪ್ರತಿಭಟನೆ ನಡೆಸಿತು.
ಕಲಬುರಗಿಯಲ್ಲಿ ಕರ್ನಾಟಕ ರಾಜ್ಯ ಸಮಿತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಮಾತನಾಡಿ, ʼರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್‌ಟಿಎ) ನಡೆಸಿದ ಪರೀಕ್ಷೆಗಳ ಸುತ್ತಲಿನ ಹಗರಣಗಳಿಂದ ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಎದುರಿಸುತ್ತಿರುವ ಆತಂಕ ತೀವ್ರ ಆಘಾತ ಮೂಡಿಸಿದೆ. ಶಿಕ್ಷಣದ ಕೇಂದ್ರೀಕರಣ, ವಾಣಿಜ್ಯಕರಣ ಹಾಗೂ ಕೋಮುವಾದ ಪ್ರತಿಪಾದಿಸುವ ಎನ್‌ಇಪಿಯನ್ನು ತೀವ್ರವಾಗಿ ಖಂಡಿಸುತ್ತದೆʼ ಎಂದರು.
ʼಕೇಂದ್ರ ಶಿಕ್ಷಣ ಸಚಿವರು ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದು, ಕೂಡಲೇ ರಾಜೀನಾಮೆ ನೀಡಬೇಕು. ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯನ್ನು ರದ್ದುಗೊಳಿಸಬೇಕು. ಎನ್‌ಟಿಎಯನ್ನು ವಿಸರ್ಜಿಸುವುದು ಮತ್ತು ಶಿಕ್ಷಣ ವ್ಯವಸ್ಥೆಯ ಕೇಂದ್ರೀಕರಣದ ಎಲ್ಲಾ ಉಪಕ್ರಮಗಳನ್ನು ರದ್ದುಗೊಳಿಸಬೇಕುʼ ಎಂದು ಒತ್ತಾಯಿಸಿದರು.
ʼ2024ರ ಜುಲೈ 1ರಂದು ಜಾರಿಗೆ ತಂದಿರುವ ಪ್ರಜಾಪ್ರಭುತ್ವ ಹಾಗೂ ಜನ ವಿರೋದಿ ಕ್ರಿಮಿನಲ್ ಕಾನೂನುಗಳನ್ನು ತಡೆಹಿಡಿದು ವಾಪಾಸು ಪಡೆಯಬೇಕು. ತರಾತುರಿಯಲ್ಲಿ ಚರ್ಚೆಯಿಲ್ಲದೆ ನಿರಂಕುಶವಾಗಿ ಮತ್ತು ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿ ಸಂಸತ್ತಿನಲ್ಲಿ ಪಾಸು ಮಾಡಿಸಿದ ಕರಾಳ ಕಾನೂನುಗಳಾಗಿವೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾದ ನಂತರ ದೇಶದ ವಿವಿಧ ಭಾಗಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದವರ ಜೀವ, ಜೀವನೋಪಾಯ ಮತ್ತು ಆಸ್ತಿಗಳ ಮೇಲೆ ನಡೆಯುತ್ತಿರುವ ಮತಾಂಧರ ಭೀಕರ ದಾಳಿಗಳನ್ನು ಬಲವಾಗಿ ಖಂಡಿಸುತ್ತೇವೆ. ಈ ದುಷ್ಕೃತ್ಯದಲ್ಲಿ ತೊಡಗಿದ ಎಲ್ಲ ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಪಡಿಸಲು ಅಗತ್ಯ ಕ್ರಮವಹಿಸಬೇಕು ಎಂದರು.
ʼಛತ್ತೀಸ್‌ಗಢದ ರಾಯ್‌ಪುರ, ಉತ್ತರ ಪ್ರದೇಶ, ಅಲಿಗಢ ಮತ್ತು ಗುಜರಾತ್‌ನಲ್ಲಿ ನಡೆದ ದಾಳಿಗಳಲ್ಲಿ ಒಟ್ಟು ಐವರು ಮುಸ್ಲಿಂ ಪುರುಷರು ಸಾವನ್ನಪ್ಪಿದ್ದಾರೆ. ಇಂತಹ ಅನೇಕ ಕಡೆ ನಡೆದ ಘಟನೆಗಳಿಂದ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಗಳಿಗೆ ಅಗತ್ಯ ರಕ್ಷಣೆಗೆ ಕ್ರಮವಹಿಸಬೇಕುʼ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಶಿಥಿಲಗೊಂಡ ಶಾಲಾ ಕಟ್ಟಡ : ಮರದ ಕೆಳಗೆ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು!
ಪ್ರತಿಭಟನೆಯಲ್ಲಿ ಸಿಪಿಐ(ಎಂ) ರಾಜ್ಯ ಸಮಿತಿ ಸದ್ಯಸೆ ಶಾಂತಾ ಘಂಟಿ ರು, ಕಾರ್ಯದರ್ಶಿ ಯು.ಬಸವರಾಜ್ ಹಾಗೂ ಪ್ರಮುಖರಾದ ಬಿ.ಸಜ್ಜನ್, ಭೀಮಶೆಟ್ಟಿ ಯಂಪಳ್ಳಿ, ಸುಧಾಮ ಧನ್ನಿ, ಪ್ರಭು ಖಾನಾಪುರೆ, ಪಾಂಡುರಂಗ ಮಾವಿನಕರ್, ಶ್ರೀಮಂತ ಬಿರಾದಾರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.