ಇತ್ತೀಚೆಗೆ ಬೆಳಗಾವಿಯ ಸವದತ್ತಿಯಲ್ಲಿ ಶಾಲೆಯ ಮಕ್ಕಳ ಕುಡಿಯುವ ನೀರಿಗೆ ವಿಷ ಬೆರೆಸಿ ಶಾಲಾ ಮಕ್ಕಳನ್ನು ಕೊಲೆ ಮಾಡಲು ಯತ್ನಿಸಿದ ಶ್ರೀರಾಮಸೇನೆಯ ಸದಸ್ಯರ ಕೃತ್ಯವು ಅತ್ಯಂತ ಕಳವಳಕಾರಿಯಾಗಿದೆ. ರಾಜ್ಯ ಸರ್ಕಾರವು ಇದನ್ನು ಭಯೋತ್ಪಾದಕ ಕೃತ್ಯವೆಂದು ಪರಿಗಣಿಸಿ ಕೂಡಲೇ ಈ ಪೈಶಾಚಿಕ ಕೃತ್ಯ ನಡೆಸಿದ ಶ್ರೀರಾಮ ಸೇನೆಯ ಗೂಂಡಾಗಳ ವಿರುದ್ಧ ಯುಎಪಿಎ ಸೆಕ್ಷನ್ ಅಡಿ ಪ್ರಕರಣ ದಾಖಲಿಸಬೇಕು ಎಂದು ಬಂಟ್ವಾಳದ ಮುಸ್ಲಿಂ ಸಮಾಜದ ಮುಖಂಡ ಹನೀಫ್ ಖಾನ್ ಕೊಡಾಜೆ ಆಗ್ರಹಿಸಿದ್ದಾರೆ.
ಶಾಲೆಯ ಮುಖ್ಯೋಪಾಧ್ಯಾಯರು ಮುಸ್ಲಿಂ ಧರ್ಮಕ್ಕೆ ಸೇರಿದವರೆಂದು ಅಮಾಯಕ ಮಕ್ಕಳನ್ನು ವಿಷವುಣಿಸಿ ಕೊಂದು ಅದನ್ನು ಮುಖ್ಯೋಪಾಧ್ಯಾಯರ ತಲೆಗೆ ಕಟ್ಟಿ ಗಲಭೆ ನಡೆಸಲು ಸಂಚು ನಡೆಸಿದ ಶ್ರೀರಾಮಸೇನೆಯ ನೀಚ ಮನಸ್ಥಿತಿ ಪೋಲಿಸರ ತನಿಖೆಯಿಂದ ಜಗಜ್ಜಾಹೀರಾಗಿದೆ ಎಂದು ತಿಳಿಸಿದ್ದಾರೆ.
“ಈ ಹಿಂದೆ ಕೂಡಾ ಸಿಂಧಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿ ಅದನ್ನು ಮುಸ್ಲಿಮರ ತಲೆಗೆ ಕಟ್ಟಲು ಯತ್ನಿಸಿ ಶ್ರೀರಾಮ ಸೇನೆ ವಿಫಲವಾಗಿದೆ. ರಾಜ್ಯದಲ್ಲಿ ಬಹಳಷ್ಟು ವರ್ಷಗಳಿಂದ ಶ್ರೀರಾಮಸೇನೆ ಸಮಾಜಘಾತುಕ ಕೃತ್ಯಗಳನ್ನು ನಡೆಸುತ್ತಾ ಬಂದಿದ್ದು ಸ್ವತಃ ಬಿಜೆಪಿ ಸರ್ಕಾರವೇ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರವರನ್ನು ರಾಜ್ಯದ ಹಲವು ಜಿಲ್ಲೆಗಳಿಗೆ ಪ್ರವೇಶ ನಿರ್ಭಂಧಿಸಿತ್ತು. ಪದೇ ಪದೇ ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಹಾಳುಗೆಡವಲು ಅಮಾಯಕ ಜನರ ಜೀವದ ಜೊತೆ ಚೆಲ್ಲಾಟವಾಡುವ ಶ್ರೀರಾಮಸೇನೆ ಇಂದು ನೀರಿಗೆ ವಿಷ ಬೆರೆಸಿದ ರೀತಿಯಲ್ಲಿ ನಾಳೆ ಬಾಂಬ್ ಹಾಕಿ ಅಮಾಯಕರನ್ನು ಕೊಂದು ಅದನ್ನು ಮುಸ್ಲಿಮರ ತಲೆಗೆ ಕಟ್ಟಲು ಷಡ್ಯಂತ್ರ ನಡೆಸುವುದರಲ್ಲಿ ಯಾವುದೇ ಸಂಶಯವಿಲ್ಲ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಂಟ್ವಾಳ | ನಗರ ಪುನರ್ವಸತಿ ಕಾರ್ಯಕರ್ತರ ನೇಮಕಾತಿ; ವಿಕಲಚೇತನರಿಂದ ಅರ್ಜಿ ಆಹ್ವಾನ
“ಆದ್ದರಿಂದ ರಾಜ್ಯ ಸರ್ಕಾರವು ಈ ಕೂಡಲೇ ಬೆಳಗಾವಿ ಘಟನೆ ಮತ್ತು ಮಂಗಳೂರಿನ ಎರಡು ಅಮಾಯಕ ಮುಸ್ಲಿಂ ಯುವಕರ ಕೊಲೆ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ದ UAPA ಸೆಕ್ಷನ್ ಸೇರಿಸಿ ಪ್ರಕರಣದ ತನಿಖೆ ನಡೆಸಬೇಕು. ಸೌಹಾರ್ದತೆಗೆ ಧಕ್ಕೆ ತರುವ ಶ್ರೀರಾಮ ಸೇನೆ ಮತ್ತು ಭಜರಂಗದಳದಂತಹ ಭಯೋತ್ಪಾದಕ ಸಂಘಟನೆಗಳನ್ನು ರಾಜ್ಯದಲ್ಲಿ ಕೂಡಲೇ ನಿಷೇಧಿಸಿ ರಾಜ್ಯದ ಸೌಹಾರ್ದತೆಯ ಪರಂಪರೆಯನ್ನು ಎತ್ತಿ ಹಿಡಿಯಬೇಕು” ಎಂದು ಮನವಿ ಮಾಡಿದ್ದಾರೆ.