ಮದ್ಯ ಸೇವಿಸಿ ಕರ್ತವ್ಯಕ್ಕೆ ಹಾಜರಾಗಿ ಬೇಜವಾಬ್ದಾರಿತನ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನಲೆ ಆರೋಗ್ಯ ಕೇಂದ್ರದ ಸಿಬ್ಬಂದಿಯೊಬ್ಬರನ್ನು ಬೀದರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ ನಿರುಗುಡೆ ಅಮಾನತುಗೊಳಿಸಿದ್ದಾರೆ.
ಹುಲಸೂರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಲ್ಯಾಬ್ ಟೆಕ್ನಿಷಿಯನ್ ಬಾಲಾಜಿ ಎಂಬುವರು ಅಮಾನತುಗೊಂಡ ಅಧಿಕಾರಿ.
ʼಅಗಸ್ಟ್ 3ರಂದು ಹುಲಸೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಹಿಳೆಯೊಬ್ಬರು ರಕ್ತ ತಪಾಸಣೆಗೆ ಬಂದ ವೇಳೆ ಬಾಲಾಜಿ ಅವರು ಮದ್ಯದ ಅಮಲಿನಲ್ಲಿ ಕರ್ತವ್ಯ ನಿರ್ವಹಿಸಿ ಬೇಜವಾಬ್ದಾರಿ ತೋರಿದ್ದು ಕಂಡು ಬಂದ ಹಿನ್ನಲೆ ಸದರಿ ಸಿಬ್ಬಂದಿ ವಿರುದ್ಧ ದೂರು ಸಲ್ಲಿಕೆಯಾಗಿತ್ತು.
ದೂರಿನ್ವಯ ಲ್ಯಾಬ್ ಟೆಕ್ನಿಷಿಯನ್ ಬಾಲಾಜಿ ಅವರನ್ನು ರಕ್ತ ಪರೀಕ್ಷೆಗೆ ಒಳಪಡಿಸಿದಾಗ ಮದ್ಯ ಸೇವಿಸಿದ್ದು ದೃಢಪಟ್ಟಿದೆ. ಆರೋಗ್ಯ ಇಲಾಖೆಯ ಹಿರಿಯ ವೈದ್ಯಾಧಿಕಾರಿಗಳ ವರದಿ ಆಧರಿಸಿ ರಕ್ತ ಪರೀಕ್ಷಣಾಧಿಕಾರಿ ಬಾಲಾಜಿ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆʼ ಎಂದು ತಿಳಿಸಿದ್ದಾರೆ.