ರಾಜಧಾನಿ ಬೆಂಗಳೂರಿನ ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟ 14 ಜನರು ಮೂಲತಃ ತಮಿಳುನಾಡಿನವರಾಗಿದ್ದಾರೆ. ಮೃತಪಟ್ಟ ಕಾರ್ಮಿಕರ ಕುಟುಂಬಸ್ಥರಿಗೆ ತಮಿಳುನಾಡು ಸರ್ಕಾರ ₹3 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದೆ.
ಬೆಂಗಳೂರಿನ ದಕ್ಷಿಣ ಹೊರವಲಯದಲ್ಲಿರುವ ಅತ್ತಿಬೆಲೆ ಗಡಿ ಚೆಕ್‌ಪೋಸ್ಟ್‌ನಿಂದ 500 ಮೀಟರ್‌ಗಿಂತ ಕಡಿಮೆ ದೂರದಲ್ಲಿರುವ ಸಗಟು ಪಟಾಕಿ ಗೋದಾಮು ಶ್ರೀಬಾಲಾಜಿ ಟ್ರೇಡರ್ಸ್‌ನಲ್ಲಿ ಪಟಾಕಿ ಅನ್‌ಲೋಡ್ ಮಾಡುತ್ತಿದ್ದ ವೇಳೆ ಪಟಾಕಿ ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡು 14 ಜನರು ಸಾವನ್ನಪ್ಪಿದ್ದಾರೆ. ಇನ್ನು 7 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತಮಿಳುನಾಡಿನ ಆರೋಗ್ಯ ಮತ್ತು ಆಹಾರ ಸಚಿವರು ಹಾಗೂ ಜನಪ್ರತಿನಿಧಿಗಳು ಅತ್ತಿಬೆಲೆ ಆಕ್ಸ್ ಫರ್ಡ್ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ.
ಕರ್ನಾಟಕ ಸರ್ಕಾರದಿಂದ ₹5 ಲಕ್ಷ ಪರಿಹಾರ
ಶನಿವಾರ(ಅಕ್ಟೋಬರ್ 07) ತಡರಾತ್ರಿ ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಘೋಷಿಸಿದ್ದಾರೆ.
ಅಗ್ನಿ ದುರಂತದಲ್ಲಿ 14 ಕಾರ್ಮಿಕರು ಸಾವೀಗಿಡಾಗಿದ್ದು, ಮೂವರಿಗೆ ಗಾಯಗಳಾಗಿವೆ. ಮೃತರು ತಮಿಳುನಾಡಿನ ಧರ್ಮಪುರಿ ಜಿಲ್ಲೆ, ಕಲ್ಲಕುರುಚಿ ಜಿಲ್ಲೆಯವರು ಎಂದು ತಿಳಿದುಬಂದಿದೆ. ಇದರಲ್ಲಿ ಎಂಟು ಜನ ಯುವಕರು ಧರ್ಮಪುರಿ ಜಿಲ್ಲೆ ಹರೂರ್ ತಾಲೂಕಿನ ಅಮ್ಮಾಪೇಟ್ಟೈ ನಿವಾಸಿಗಳು ಎಂದು ಮಾಹಿತಿ ದೊರೆತಿದೆ.
ಧರ್ಮಪುರಿ ಜಿಲ್ಲೆಯ ಎಂಟು ಯುವಕರು ಸಾವು
ಪ್ರಕಾಶ್ (20), ವೆಟ್ಟಪ್ಪನ್(25), ಆದಿಕೇಶವನ್(23), ವಿಜಯರಾಘವನ್(20), ಇಳಂಬರುತಿ(19), ಆಕಾಶ್(23), ಗಿರಿ(22), ಸಚಿನ್(22) ಮೃತ ಯುವಕರು.
ಕಲ್ಲಕುರುಚಿ ಜಿಲ್ಲೆಯ ಮೂವರು ಯುವಕರು ಸಾವು
ಪ್ರಭಾಕರನ್(17), ವಸಂತರಾಜ್(23), ಅಪ್ಪಾಸ್(23) ಮೃತರು. ಇನ್ನೂ ಮೂವರ ಮೃತದೇಹಗಳ ಗುರುತು ಪತ್ತೆಯಾಗಿಲ್ಲ. ಮೃತದೇಹಗಳು ಅತ್ತಿಬೆಲೆಯ ಆಕ್ಸ್‌ಫರ್ಡ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಬಾಲಾಜಿ ಪಟಾಕಿ ಗೋದಾಮು ಮಾಲಿಕ ರಾಮಸ್ವಾಮಿ ರೆಡ್ಡಿ ಮಗ ನವೀನ್, ರಾಜೇಶ್ ಮತ್ತು ವೆಂಕಟೇಶ್. ಸಂಜಯ, ಚಂದ್ರು, ಪೌಲ್ ಕಬೀರ್. ಇವರನ್ನು ಅತ್ತಿಬೆಲೆಯ ಆಕ್ಸ್‌ಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆನೇಕಲ್ ಉಪ ವಿಭಾಗದ ಅತ್ತಿಬೆಲೆ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅತ್ತಿಬೆಲೆ ಪಟಾಕಿ ದುರಂತ | ಮೃತ ಕಾರ್ಮಿಕರಲ್ಲಿ ಒಂದೇ ಗ್ರಾಮದ 8 ವಿದ್ಯಾರ್ಥಿಗಳು
ಎರಡು ಸರ್ಕಾರ ನೀಡುತ್ತಿರುವ ಈ ಪರಿಹಾರ ಮೊತ್ತ ಸಾಲದು, ಪರಿಹಾರ ಮೊತ್ತವನ್ನು ಇನ್ನೂ ಹೆಚ್ಚಿಸಿ ಮೃತರ ಕುಟುಂಬಕ್ಕೆ ನ್ಯಾಯ ನೀಡಬೇಕು ಹಾಗೂ ಎರಡೂ ರಾಜ್ಯದಿಂದ ಮೃತರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡಬೇಕು. ಕೇಂದ್ರ ಸರ್ಕಾರವು ₹1 ಕೋಟಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ವಿಡುದಲೈ ಚಿರತೆಗಳ್ (ವಿಕೆಸಿ) ಸಂಘಟನೆ ಪದಾಧಿಕಾರಿಗಳು ಆಕ್ಸ್‌ಫರ್ಡ್ ಆಸ್ಪತ್ರೆಯ ಶವಗಾರದ ಮುಂದೆ ಭಾನುವಾರ ಪ್ರತಿಭಟನೆ ನಡೆಸಿದರು.
“ಮೃತರ ಕುಟುಂಬಸ್ಥರಿಗೆ ತಮಿಳುನಾಡು ಸರ್ಕಾರ ₹3 ಲಕ್ಷ ಪರಿಹಾರ ಘೋಷಿಸಿದೆ. ಹೆಚ್ಚಿನ ಪರಿಹಾರಕ್ಕೆ ಮೃತರ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಸ್ಟಾಲಿನ್ ಜೊತೆ ಚರ್ಚಿಸಿ ಮತ್ತಷ್ಟು ಪರಿಹಾರ ಕೊಡಿಸುತ್ತೇವೆ” ಎಂದು ಅತ್ತಿಬೆಲೆಯಲ್ಲಿ ತಮಿಳುನಾಡು ಸಚಿವ ಮಾ.ಸುಬ್ರಮಣಿಯನ್ ಹೇಳಿದರು.