ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ನಡೆದ ಅಗ್ನಿ ದುರಂತದಲ್ಲಿ ಗಾಯಗೊಂಡಿದ್ದ ಮತ್ತೋರ್ವ ಯುವಕ ಚಿಕಿತ್ಸೆ ಫಲಕಾರಿಯಾಗದೇ ಅ.18ರಂದು ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.
ರಾಜೇಶ್ ಮೃತ ದುರ್ದೈವಿ. ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. ಅ.7 ರಂದು ಬೆಂಗಳೂರಿನ ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ದುರಂತದಲ್ಲಿ 14 ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಇನ್ನೂ ಮೂರು ಜನ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶ್ ರಾಮಪ್ಪ, ದಿನೇಶ್ ಹಾಗೂ ರಾಜೇಶ್ ಎಂಬುವವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಗಾಯಗೊಂಡಿದ್ದ ಅಂಗಡಿ ಮಾಲೀಕ ನವೀನ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅತ್ತಿಬೆಲೆ ಅಗ್ನಿ ದುರಂತ | ಮ್ಯಾಜಿಸ್ಟೀರಿಯಲ್ ತನಿಖೆಗೆ ಸರ್ಕಾರ ಆದೇಶ
ಕರ್ತವ್ಯಲೋಪದ ಆರೋಪದ ಮೇಲೆ ಆನೇಕಲ್ ತಾಲೂಕಿನ ಹಿಂದಿನ ತಹಶೀಲ್ದಾರ್ ಶಶಿಧರ್ ಮಾಡ್ಯಾಳ್, ಉಪ ತಹಶೀಲ್ದಾರ್ ಶ್ರೀಧರ್, ರಾಜಸ್ವ ನಿರೀಕ್ಷಕ ಅತ್ತಿಬೆಲೆ, ಗ್ರಾಮ ಆಡಳಿತಾಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದರು.
ಅತ್ತಿಬೆಲೆಯಲ್ಲಿರುವ ಪಟಾಕಿ ಗೋದಾಮಿಗೆ 1 ಸಾವಿರ ಕೆಜಿ ಮಾತ್ರ ಸ್ಟಾಕ್ ಇಡಲು ಅವಕಾಶ ನೀಡಲಾಗಿತ್ತು. ಪರವಾನಿಗೆ ನೀಡುವಾಗ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ ಪರವಾನಿಗೆ ನೀಡಿರುವ ಹಿನ್ನಲೆಯಲ್ಲಿ ಈ ಅವಘಡಕ್ಕೆ ಕಾರಣವೆಂದು 4 ಜನ ಅಧಿಕಾರಿಗಳನ್ನ ಸೇವೆಯಿಂದ ಅಮಾನತು ಮಾಡಿತ್ತು.
ಸದ್ಯ ಅತ್ತಿಬೆಲೆ ಪಟಾಕಿ ಗೋದಾಮಿಯಲ್ಲಿ ನಡೆದ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ‘ಮ್ಯಾಜಿಸ್ಟೀರಿಯಲ್ ತನಿಖೆ’ ನಡೆಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.