ಔರಾದ್‌ ಸೀಮೆಯ ಕನ್ನಡ | ನಮ್ಮಾಯಿ-ಮುತ್ಯಾ ಒಂದೇ ದಿನಾ ಸರಿಹೋದ್ರೂ….!

Date:

Advertisements

ನಮ್ಮಾಯಿ ಹೆಸ್ರು ಲಕ್ಷ್ಮೀಬಾಯಿ, ಮುತ್ಯಾನ್‌ ಹೆಸ್ರು ಲಕ್ಷ್ಮಣ ಅಂತ. ಈ ಹೆಸ್ರು ನಾ ದೊಡ್ಡವ್‌ ಆದ್ಮಾಲೇ ನಮ್ಮವ್ವ ನಂಗ್‌ ಹೇಳಿದ್‌ ಮ್ಯಾಲ್‌ ಖುನಾ ಆಯ್ತ್‌, ಯಾಕಂದ್ರು ನಮ್ಮವ್ವ ಮದೀ ಆಗಿಂದ್‌ ಎಡ್ಡ ವರ್ಷಿಗೇ ನಮ್ಮಾಯಿ-ಮುತ್ಯಾ ಒಂದೇ ದಿನಾ ಸರಿಹೋದ್ರೂ ಅಂತ. ಅದ್ಕೇ ನಾ ನಮ್ಮಾಯಿ-ಮುತ್ಯಾನ್‌ ಮುಖಾಬೀ ನೋಡಿಲ್. ಅವ್ರು‌ ಹ್ಯಾಂಗ್ ಇದ್ದೂರ್‌ ಜರಾ ನೋಡುರ್ ಅಂದೂರ್ನೂ ಆ ಕಾಲ್ದಾಗ್ ಇಳ್ಸಿಂದ್‌ ಒಂದು ಫೋಟೊ ಸುಧೇ ದಿಕ್ಕಿಲ್ಲಾ..

ನಮ್ಮಾಯಿಗಿ ಐದು ಮಂದಿ ಹೆಣ್ಮಕ್ಳು, ಇಬ್ಬರ್‌ ಗಂಡ್ಸ್‌ ಮಕ್ಕುಳ್‌, ಅಂದುರ್‌ ಹೆಚ್ಚಾಕಮ್ಮಿ ಅರ್ದ್‌ ಡಜನ್‌ ಅಂದ್ಹಾಂಗ್.‌ ಆಗ ಭಾಳ್‌ ಮಂದಿಗಿ ಕಮ್ಮಿ ಅಂದ್ರೂ ಅರ್ದ್‌ ಡಜನ್‌ ಮಕ್ಕುಳ್‌ ಇರ್ತುದ್ರೇ ಅಲಾ…

ದೊಡ್ಡ್‌ ಮಗ್ಳಿಗಿ‌ ಛಂದಂದ್ ನೆಂಟುಸ್ತಾನ್‌ ಬಂದಿತ್. ಒಂದೇ ಸಲಾಕ್‌ ಇಬ್ರು ಮದೀ ಮಾಡಾರ್‌ ಅಂತ್ಹೇಳಿ, ದೊಡ್ಡ್ ಮಗ್ಳದು, ದೊಡ್ಡ‌ ಮಗುಂದ್‌ ನೆಂಟುಸ್ತಾನ್ ಮಾಡ್ದೂರ್.‌ ಛೇಸ್ಸೇ ರೂಪಾಯಿ ಹುಂಡಾ ಕೊಟ್ಟಿ‌ ಮನಿಗಿ ಸೊಸಿಗಿ ತಂದ್ರೂ, ಚಾರ್ಸೇ ರೂಪಾಯಿ ಹುಂಡಾ ತಗೊಂಡಿ ಮಗ್ಳಿಗಿ ಮದಿ ಮಾಡಿ ಗಂಡುನ್‌ ಮನೀಗಿ ಖಳ್ಸ್‌ ಕೊಟ್ರು…

Advertisements

ಸಣ್ ವಯಸ್ಸಿನಾಗೇ ಇಬ್ಬರ ಮಕ್ಕುಳ್ ಮದೀ ಮಾಡ್ದೂರ್.‌ ಮನೀಗಿ ಅಳ್ಯಾ, ಸೋಸಿ ಬಂದ್ದೂರ್‌ ಅಂತ ಆಯೀ ಮುತ್ಯಾ ಹಿಗ್ಗಿ ಹಿರೇಕಾಯಿ ಆದ್ರೂ….ಚಾಪಿಯೋಟ್‌ ಹೊಲಾ ಇಲ್ದೋದ್ರೂ ಕೈಮೇಲೆ ಕೂಲಿ ನಾಲಿ ಮಾಡಿ, ಇದ್ದಿಂದ್ ನುಚ್ಚು ಅಂಬ್ಲಿ ಕೊಂಡಿ ಜಿಂದಗಿ ಮಾಡ್ಕೊತಾ….ವರ್ಷಿಗೊಬ್ಬುರ್‌ ಮಕ್ಕುಳ್ ಮದೀ ಮಾಡಿ ಮುಗ್ಸಿ ನಿರುಮ್ಮೋಳ್ ಆದ್ರೂ…

ಮನ್ಯಾಗ್‌ ಇದ್ದಿಂದ್ ಬಾರಾ ಕತ್ತಿ ದೊಡ್ಡ್‌ ಮಗಾ ಮೈಯಿಸ್ಕೊಂಡ್‌ ಬರಾದು, ಅವ್ವಪ್ಪುನ್ ಸರಿ ಗಡ್ಗಿ ಮಾರ್ಲಾಕ್‌ ಹೋಗೋದ್‌ ಮಾಡ್ತಿದಾ. ಮುತ್ಯಾ ಬಾರಾ ಹಮೇಶಾ ಮಣ್ಣಿನ್‌ ಗಡ್ಗಿ ಮಾಡ್ತಿದಾ, ಹಬ್ಬ, ಹುಣ್ಣಿಗಿ, ಸತ್ತೂರ್‌, ಹುಟ್ಟೂರ್‌ ಕುಂಬಾರ ಮಾಡಿಂದ್‌ ಐರಾಣಿ, ಮುಚ್ಚಾಳ್‌, ಮಗೀ ಬೇಕೇ ಅಲಾ. ಮತ್‌ ಊರ್ಗಾರಿ ಬ್ಯಾರೇ ಇತ್ತು.

ಎಳಾಮಾಸೀ, ದಸರಿ, ದಿವಳಗಿ, ಸಂಕ್ರಾತ್ರಿ ಹಿಂಗ್‌ ಎಲ್ಲಾ ಯಾಳಿ ಊರಾಗ ಒಕ್ಕಲಿಗ್ಯಾರಿಗಿ ಗಡ್ಗಿ, ಬಿಂದ್ಗಿ, ಮುಚ್ಚಳ್‌ ಮಗೀ…ಮತ್…ಮದೀ ಇದ್ರು, ದೇವಕರೀ ತೆಗಿಲಾಕ್‌ ಅಂತ ಗುಗ್ಗುಳ ಕೊಡಾ, ಐರಾಣಿ ಕುಡತಿದ್ರು…ಅದ್ಕಾ ರೊಕ್ಕಾ ಏನ್ ಕುಡ್ತಿದ್ದಿಲ್ಲ….ರಾಶಿ, ಉಳ್ಳಾಕ್ ನಾಕ್ಅಡ್ಡಿ ಜ್ವಾಳಾ,‌ ಬ್ಯಾಳಿ ತಕೋತಿದ್ರು…

ಮುತ್ಯಾ ಲಕ್ಷ್ಮಣ ಕತ್ತಿ ಮ್ಯಾಲೇ ಊರಾಗಿಂದ್‌ ರಾಶಿ ರುಪ್ಟಿ ತರೋದು, ಕತ್ತಿ ಮ್ಯಾಲೆ ಸುತ್ತಾ ಹಳ್ಳಿ ತಿರ್ಗಿ ಗಡ್ಗಿ ಮಾರಾ ದಂಧ್ಯೆ ಮಾಡ್ತಿದ್ದುರ್.‌ ಗಡ್ಗಿ ಮಾಡ್ಲಾಕ್ ಜಂಗ್ಲತ್ ಕಡೀ ಮಡ್ಡಿ ಮ್ಯಾಲಿಂದ್‌ ಕೆಂಪಂದ್ ಮಣ್ಣು ಕತ್ತಿ ಮ್ಯಾಲೇ ತಕೊಂಡು ಬರ್ತಿದ್ರು.‌ ಕೆಂಫಂದ್ ಮಣ್ಣಿನಾಗ್‌ ಬರೀಕ್‌ ಹಳ್ಳಾ, ಉಸುಬು ಇರ್ತಿತ್ತು. ಅದು ಝಲೊಡಿ ಹಿಡೇದು, ಉಸ್ಬು ಎಲ್ಲಾ ತೆಗ್ದಿ ನೀರಿನಾಗ ಕಲ್ಸಿ ಸೋಸಿ, ರೊಟ್ಟಿ ಮಾಡಾ ಹಿಟ್ಟಿನ್ಹಾಂಗ್‌ ಮಾಡೋದು.‌ ಆ ಮಣ್ಣಿನಾಗ್‌ ಕತ್ತೆ ಲದ್ದಿ, ಖ್ರರಂದ್ ಮಸೀ ಎಲ್ಲಾ ಹಾಕೋ ಕೆಲ್ಸಾ ಆಯೀ ಮಾಡ್ತಿದ್ದುಳ್.‌ ಮುತ್ಯಾ ಛಂದ್ ಮಣ್ಣು ತುಳೇದು….ಟಿಗ್ರಿ ಮ್ಯಾಲ್ ಗಡ್ಗಿ ಮಾಡದು…ಒಣಗಿನ್ ಮ್ಯಾಕ್ ಆವಗಿ ಒಳಗ್ ಸುಡೋದು ಎಲ್ಲ ಮುತ್ಯಾ ಮಾಡ್ತಿದಾ…

ಇಂಥಾ ಕಷ್ಟಾದಾಗೇ ಆಯಿಗಿ ಯಾರೋ ಭಾನಾಮತಿ ಮಾಡ್ಯಾರ್ ಅಂಬೋ ಸುದ್ದಿ ಬಂತು.‌ ಪ್ರತಿ ಹುಣ್ಣಿ, ಅಮಾಸಿಗಿ ಆಯಿ ಹ್ಯಾಂಗೆಂಗೋ ಚಿರದು, ಮನೀ ಥುಂಬಾ ಹೊಳ್ಯಾಡ್ಕೊತಾ ಮನ್ಯಾಸ್‌ ಮಂದಿಗಿ ಪರೇಶನ್‌ ಮಾಡ್ತಿದ್ಳು. ಒಮ್ಮೊಮ್ಮಿ ʼನಾ ಹೇಳಿಂದ್‌ ಮರ್ತೀರಿ ನೀವ್‌, ನಂದ್ ಹರಕಿ ಪೈಲೇ ತೀರ್ಸ್ರೀ, ಇಲ್ಲಾಂದುರ್‌ ನಿಮ್‌ ಮನೀ ಪೂರಾ ಬರ್ಬಾದ್‌ ಮಾಡ್ತಾ ನೋಡ್‌ʼ ಅಂತ ಮೈದಾಗ ದೇವ್ರು ಬಂದ್ಹಾಂಗ್‌ ಹೇಳಿ ಘಾಬ್ರಿ ಹುಟ್ಸಿತ್ತಿದ್ದುಳ್.‌ ʼನಮ್‌ ಮನೀ ಛಂದ್‌ ನಡೇದ್‌ ನೋಡಿ ಯಾರ್‌ ಕಣ್ಣಾಗ್‌ ಮಣ್ಣು ಬಿತ್ತೋ…ಏನೋ…ನಮಗ್‌ ಹಾಳ್‌ ಮಾಡ್ದೂರ್‌ ಅವ್ರಿಗೇನ್‌ ಛಂದ್‌ ಆಗಲ್ದುʼ ಅಂತ ಮುತ್ಯಾ ಬೈಕೊತಾ ಮುಲ್ಯಾಗ್‌ ಕುಂತಿ ಕುದಿ ಮಾಡ್ಕೋಲಾಕ್ ಶುರು ಮಾಡ್ದಾ…

ಆಯಿ ಕುದಿದಾಗೇ ಮುತ್ಯಾ ದಿನಂಪರಿ ಬಡೂ ಆದಾ…ಆಯೀ ಧಡಾ ಬೀ ವರ್ಷಿಗೀಟ್‌ ಇಳ್ಕೊತಾ ಬರ್ಲಾತಿತ್.‌ ದಂಧ್ಯಾ ಮಾಡ್ಲಾಕ್‌ ಕೈಲಾಗ್ಲದ್‌ ಸಲೇಕ್‌ ಗಡ್ಗಿ ಮಾಡದೂ ಬಿಟ್ರು…..ಇದ್ದಿಂದ್‌ ಕತ್ತಿ ದಂಧ್ಯಾ ಎಲ್ಲಾ ದೊಡ್ಡ್‌ ಮಗಾನೇ ದಂಧ್ಯಾ ಮಾಡ್ಕೊತಾ ಮನೀ ಸಂಸಾರ್‌ ಎಲ್ಲಾ ನೊಡ್ಲಾತುನ್.

WhatsApp Image 2025 04 01 at 4.01.48 PM

‌ಆಯಿ-ಮುತ್ಯಾ ಇಬ್ರಿಗೂ ಹೆಚ್ಚು ಕಮ್ಮಿ ಸಾಟೀ ಆಸುಪಾಸು ಉಮ್ಮಾರ್‌ ಆಗಿತ್‌, ಖರೇ ಒಬ್ರಿಗಿ ಬಿಟ್ಟಿ ಒಬ್ರು ಇರ್ತಿದ್ದಲ್.‌ ಹಿಂಗಾಗಿ ಒಬ್ರು ಕುದಿದಾಗ್‌ ಒಬ್ರು ಆರಾಮ್‌ ಇಲ್ದ್‌ ಸಲೇಕ್‌ ಹಾಸ್ಗಿ ಹಿಡ್ದೂರ್.‌ ಸಾಯೋ ಉಮ್ಮಾರ್ದಾಗ್‌ ಒಬ್ರಿಗೊಬ್ರು ಶರ್ತಿ ಹಾಕ್ತಿದ್ರು….ಮುತ್ಯಾ ʼನಾನೇ ಪೈಲಾ ಸಾಯ್ತಾ‌ʼ ಅಂತಿದಾ…ಆಯಿ ಇಲ್ಲ..ಇಲ್ಲಾ…ʼಹ್ಯಾಂಗ್‌ ಬೀ ನಾನೇ ಪೈಲಾ ಸಾಯ್ತಾ ನೋಡಟ್ರೀʼ ಅಂತ ಆಣಿ-ಪ್ರಮಾಣ ಮಾಡ್ಕೊತಿದ್ರು….

ಹಾಸ್ಗಿ ಹಿಡ್ದ್ ತಿಂಗಳಾಗಿತ್ತು. ಕೊನಿಗಿ ಒಂದಿನಾ ತಾಯಿ ಹೊಟ್ಟ್ಯಾಗ್‌ ಸೂರ್ಯ ಹೋಗೋ ಪೈಲಾ ಆಯಿ ಲಕ್ಷ್ಮೀಬಾಯಿ ಜೀವಾ ಹೋಯ್ತು….ಆಯಿ ಸರಿಹೋಗಿಂದ್‌ ಸುದ್ದಿ ಎಲ್ಲಾ ನೆಂಟುರಿಗಿ, ಹೆಣ್ಮಕ್ಳಿಗಿ ಪತಾ ಹತ್ತಿತು..ಹೆಣ್ಮಕ್ಕುಳು, ಬಲ್ಲಿ ಇದ್ದಿಂದ್‌ ನೆಂಟುರ್‌ ಬಾಜಾ ತಗೊಂಡು ಅವತ್ತೇ ಸಂಜಿಗಿ ಬಂದ್ರು…ಉಳ್ದಿಂದ್‌ ನೆಂಟುರ್‌‌ ʼಮಣ್ಣ್‌ ಆಗ್ಲಾಕ್‌ ಹ್ಯಾಂಗ್ ಬೀ ನಾಳಿಗಿ ಮುಂಜಾನ್‌ ಬಾರಾ ಏಕ್‌ ಆಯ್ತುದ್‌ʼ ನಾಳಿಗೇ ಹೋಗರಿ ಅಂತ ಸುಮ್ಮುನಾಗಿದ್ರು..

ಆಯಿ ಸತ್ತಿಂದ್‌ ಸುದ್ದಿ ಕೇಳಿ ಮುತ್ಯಾ ಎದಿ ಒಡಿತಾನ್‌ ಅಂತ ಝಲ್ದಿ ಹೇಳಿಲ್ಲೇ. ಎಲ್ಲಾ ಹೆಣ್ಮಕ್ಕುಳ್‌ ಬಂದ್ಮ್ಯಾಲ್‌ ಜೋರ್ದಿಂದ್‌ ಧನಿ ತೆಗ್ದಿ ಅಳ್ಳಾತುರ್‌, ಮುತ್ಯಾನ್‌ ಕೊಳ್ಳಿಗಿ ಬಿದ್ದು ಅಳ್ಳಾಕ್‌ ಶುರು ಮಾದ್ಡುರ್…ಪೈಲಾನೇ ಬ್ಯಾನಿ ಬಿದ್ದಿನ್‌ ಮನ್ಸ್ಯಾ…ಈಗೋ ನಾಳಿಗೋ ಜೀವ ಹೋಗೋ ಹಾಂಗ್‌ ಇದ್ದಿನ್‌ ಮುತ್ಯಾಗ್‌ ಹೆಂಡ್ತಿ ಜಿವಾ ಹೋಗಿಂದ್‌ ಖುನಾ ಆದ್ಮ್ಯಾಲ್ ʼಕಡೀಗಿ ಅಕಿಂದೇ ಖರೇ ಆಯ್ತು…ನಂಗ್‌ ಬಿಟ್ಟಿ ಹೋದುಳ್‌ʼ ಅಂತ ಮತ್ತೀಟ್‌ ಎದಿಒಡ್ದಿ ಮಾತಾಡಾದೇ ಬಿಟ್ಟಾ….

ರಾತ್ರಿ ಬೆಳಗನಾ ಎಲ್ರೂ ಆಯೀ ಹೆಣ ಮುಂದ್‌ ಕುಂತಿ ಆಳ್ಳಾತುರ್‌ ಬೀ ʼಬಾಬಾ ಹ್ಯಾಂಗ್‌ ಬೀ ಘಾಬ್ರಿ ಬಿದ್ದಾನ್‌, ಯಾನ್‌ ಆಯ್ತುದೋ ಏನೋʼ ಅಂತ ಮಕ್ಕುಳ್‌ ಮುತ್ಯಾನ್‌ ಬಲ್ಲೇ ಕುಂತಿ ಸಮಧಾನ ಮಾಡ್ಲಾತಿದ್ರು… ಈಟು…ಈಟು…ಕಮ್ಜೋರ್‌ ಆಕೋತಾ ಬಂತು…ಹಂಗೋ ಹಿಂಗೋ ಭೆಳಾರ್‌ ಆಯ್ತು. ಒಬ್ರು ಒಬ್ರು ನೆಂಟುರ್‌ ಬರೋದ್‌ ಬರ್ಲಾತುರ್…

ಮುತ್ಯಾನ್ ಉಸ್ವಾಸ್ ಮ್ಯಾಗಿಂದ್ ಮ್ಯಾಲೇ ನಡ್ದಿತ್. ಮುತ್ಯಾನ್‌ ಜಿವಾ ಸಣ್‌ ಮಗಳ್‌ ಮ್ಯಾಲ್‌ ತೋಲ್ ಇತ್ತ್. ಸಣ್‌ ಮಗುಳ್‌ ಗಿಲಾಸಿನಾಗ್‌ ಥೋಡೆ ಹಾಲ್‌ ಕುಡ್ಸಿದುಳ್…‌ಅರ್ಧ ಗಿಲಾಸ್‌ ಹಾಲ್‌ ಬಿ ಕೊಂಡಿಲ್ಲಾ..ಮುಂಜಾನತ್‌ ಎಂಟುರ್‌ ಸುಮಾರಿಗಿ ಮುತ್ಯಾಬೀ ಕಣ್ಣು ಮುಚ್ದುನ್…

ಗಂಡ-ಹೆಂಡ್ತಿ ಇಬ್ಬರೂ ಒಂದೇ ದಿನಾ ಸತ್ತಿಂದ್‌ ಸುದ್ದಿ ಊರಿಗೇ ಊರೇ ಖುನಾ ಆಯ್ತು…ಸುತ್ತಾ ಬಾರಾ ಹಳ್ಳಿಗ್ಯಾಲ್ಲಾ ಖುನಾ ಆಗಿ ʼಅದೆಷ್ಟು ಛಂದ್‌ ಜಿವಾ ಹೊಯ್ತು ನೋಡ್ರೀ…ಮುತೈದೇರ್‌ ಆಗಿ ಸಾಯೋದ್‌ ಅಂದುರ್ ಎಲ್ಲ ಕಿಸ್ಮತ್ ಬೇಕ್. ಇಂಥಾ ಸಾವ್‌ ಬರ್ಬೇಕ್‌ ಅಂದುರ್‌ ಭಾಳ್‌ ಪುಣ್ಯ ಮಾಡ್ಬೇಕ್‌ ಆಯ್ತುದ್. ಒಬ್ಬರ್‌ ಮ್ಯಾಲ್‌ ಒಬ್ರುಗಿ ಜಿವಾ ಭಾಳ್‌ ಇತ್ತು. ಅದ್ಕೆ ದ್ಯಾವ್ರುಬಿ…ಕೊನಿಗಿ ಜೋಡಿಲಿಂದೇ ಕರ್ಕೊಂಡುನ್‌ʼ ಅಂಬಾ ಮಾತ್‌ಗೊಳ್ ಎಲ್ಲಾ ಕಡೀ ಕೇಳಿ ಹೊಂಟುವ್…‌

ʼಅದೆಂಥಾ ಸಾವು ನೋಡ್ರೀ!…..ನಡೀರಿ ನಾವ್ಬೀ ಮಣ್ಣಿಗಿ ಹೋಗರಿʼ ಅಂತ ಸುತ್ತಾ ಹಳ್ಳಿ ಮಂದಿ ಬಂದ್ರು….ಮದ್ವಿಗಿ ಹ್ಯಾಂಗ್‌ ಸರ್ಬಾರ್ ಮಾಡ್ತಾರ್‌ ಎಲ್ಲಾ ಹಂಗೇ ನಡ್ದಿತ್ತು….ಒಂದೇ ಸಲಾ…ಮೈತೊಳ್ದಿ…ಜೋಡಿದಿಂದ್‌ ಕುಡ್ಸೋದು…ಆಯಿ ತವ್ರು ಮನ್ಯೋರ್‌ ತಂದಿನ್ ಹೊದ್ಕಿ ಒಮ್ಮೇ ಮಾಡದುರ್…ಬಂದಿಂದ್‌ ನೆಂಟುರ್‌ ಅಕ್ಷಂತಿ ಹಾಕಿನಾಂಗ್‌ ಇಬ್ರಿಗೂ ಒಂದೇ ಸಲಗುಲಾಲ್‌ ಹಾಕೋದು, ಒಂದೇ ಸಲಾ ಹೆಣ ಎತ್ತಿ ತಗೊಂಡು ಹೋಗ್ಲಾತಿದ್ರು. ಅದೇ ಟೈಮಿಗಿ ನಾಕ್‌ ಹನಿ ಮಳೀ ಬಂತು…ಅದು ನೋಡಿ ಎಲ್ರೂ…ʼಅಯೀ ನೋಡ್ರೀ ಅಕ್ಷಂತಿ ಹಾಕಿನಾಂಗ್‌ ಮಳೀ ಹ್ಯಾಂಗ್‌ ಬಂತುʼ ಅಂತ ಅನ್ಕೊತಾ ಮುಂದೋದ್ರು…

ಆಯಿ..ಮುತ್ಯಾನ್‌ ಮಕ್ಕುಳ್‌, ಮೊಮ್ಮಕ್ಕುಳ್‌, ನೆಂಟುರ್‌ಗಿಂತಾ ಪರ‌ ಊರಿನ್‌ ಮಂದೀನೇ ಢಿಗಾರಿ ಬಂದಿದುರ್…ಯಾವತ್ ಬೀ ಕಣ್ಣಿಗಿ ನೀರ್‌ ಬರಲ್ದ್‌ ಮನ್ಸ್ಯಾ ಅವತ್ತು…ಕಣ್ಣಾಗ್‌ ನೀರ್‌ ತಂದಿ…ʼಅಬ್ಬಾ…! ಅದೆಂಥಾ ಸಾವ್ರೀ ಇದು…ಹಿಂಗ್‌ ಸಾವ್‌ ಬರ್ಬೇಕ್‌ ಅಂತ ದೇವ್ರಬಲ್ಲಿ ಬೇಡ್ಕೊಂಡ್‌ ಬರ್ಬೇಕ್‌ ಆಯ್ತುದ್‌ʼ ಅಂತ ಒಬ್ರಿಗೊಬ್ರು ಮಾತಾಡ್ಕೊತಾ ಹೋಗಿ ಒಂದೇ ಕುಣ್ಯಾಗ್‌ ಇಬ್ರಿಗೂ ಕೂಡ್ಸಿ ಒಂದೇ ಸಲ ಮಣ್ಣ ಹಾಕಿ ಬಂದ್ರು…..

ಈ ನುಡಿಗಟ್ಟು ಓದಿದ್ದೀರಾ? ಔರಾದ್‌ ಸೀಮೆಯ ಕನ್ನಡ | ಹಂತಿ ಹೊಡಿಲಾಕ್‌ ನಮ್‌ ಎತ್ಗೊಳ್‌ ಖಾಲಿನೇ ಅವಾ!

ಆಯಿ-ಮುತ್ಯಾ ಸರಿಹೋಗಿ…ಹೆಚ್ಚುಕಮ್ಮಿ ಚಾಳಿಸ್‌ ವರ್ಷ್…ಆಗಿರ್ಬೇಕ್…ಖರೇ ಸುತ್ತಾ ಹಳ್ಳಾಗ್ ಮಂದಿ ಹಿನಾ.. ನೆಪ್ಪ್ ಮಾಡಿ…ʼಅಯೀ…ಅವ್ರುದು ಭಾಳ್‌ ಭಾರೀ ಸಾವ್‌…ಹಂಥಾ ಸಾವ್‌ ಲಾಕಿಗ್ ಏಕ್ ಬರ್ತುದ್’ ಅಂಬಾ ಮಾತ್ ಆಗಾಗ್ ಕೇಳ್ತಾ ಇರ್ತಾ…

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

2 COMMENTS

  1. ಇದು ಬರಿ ಬರಹ ಅಲ್ಲರ್ರಿ ಅಣ್ಣ ಇದರಲ್ಲಿ ಕುಂಬಾರಿಕೆಯ ಸಂಪೂರ್ಣ ಚಿತ್ರಣ ತೋರಿಸಿರಿ. ಒಂದು ಮಣ್ಣಿನ ಗಡಗಿಯ ಹಿಂದೆ ಎಷ್ಟೊಂದು ಪರಿಶ್ರಮ ಇದೆ ಅನ್ನುವುದು ಮನವರಿಕೆ ಮಾಡಿಕೊಟ್ಟಿರಿ.

    ಜೊತೆಗೆ ಆಯಿ ಮುತ್ಯಾರ ಅನನ್ಯ ಪ್ರೀತಿಯು ಸಹ ಇಲ್ಲಿ ಅನಾವರಣಗೊಂಡಿದೆ.

    ಸುಪರ್ 👌🙏

  2. ಇದು ಬರಿ ಬರಹ ಅಲ್ಲರ್ರಿ ಅಣ್ಣ ಇದರಲ್ಲಿ ಕುಂಬಾರಿಕೆಯ ಸಂಪೂರ್ಣ ಚಿತ್ರಣ ತೋರಿಸಿರಿ. ಒಂದು ಮಣ್ಣಿನ ಗಡಗಿಯ ಹಿಂದೆ ಎಷ್ಟೊಂದು ಪರಿಶ್ರಮ ಇದೆ ಅನ್ನುವುದು ಮನವರಿಕೆ ಮಾಡಿಕೊಟ್ಟಿರಿ.

    ಜೊತೆಗೆ ಆಯಿ ಮುತ್ಯಾರ ಅನನ್ಯ ಪ್ರೀತಿಯು ಸಹ ಇಲ್ಲಿ ಅನಾವರಣಗೊಂಡಿದೆ.

    ಇದೆಲ್ಲಾವು ನಮ್ಮ ಬೀದರ ಭಾಷೆಯಲ್ಲಿ ಓದಿ ಆನಂದಿಸುವ ಮಜಾನೇ ಬೇರೆ.
    ಸುಪರ್ 👌🙏

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಬಳ್ಳಾಪುರ | ದೇಶದಲ್ಲೇ ಮೊದಲ ಬಾರಿಗೆ AI ತಂತ್ರಜ್ಞಾನದಿಂದ ಸೇವೆ ನೀಡಲು ಮುಂದಾದ ಜಿಲ್ಲಾ ಪೊಲೀಸ್

ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ...

ಬಾಗೇಪಲ್ಲಿ | ಡಿ.ದೇವರಾಜ ಅರಸುರವರ ಆಶಯ, ಚಿಂತನೆಗಳು ಇಂದಿಗೂ ಮಾದರಿ: ತಹಶೀಲ್ದಾರ್ ಮನೀಷ್ ಎನ್ ಪತ್ರಿ

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಆಶಯಗಳು, ಚಿಂತನೆಗಳು ಇಂದಿಗೂ ಮಾದರಿಯಾಗಿವೆ....

ಮಂಡ್ಯ | ಹಿಂದುಳಿದ ಸಮುದಾಯದವರ ಬದುಕು ಕಟ್ಟಿಕೊಡಲು ಶ್ರಮಿಸಿದ ಮಹಾನ್ ನಾಯಕ ಡಿ.ದೇವರಾಜ ಅರಸು: ಜಿಲ್ಲಾಧಿಕಾರಿ ಡಾ.ಕುಮಾರ

ಸಾಮಾಜಿಕವಾಗಿ ಹಿಂದುಳಿದ ಎಲ್ಲ ಸಮುದಾಯದ ಜನರಿಗೆ ಬದುಕು ಕಟ್ಟಿಕೊಡಲು ಶ್ರಮಿಸಿದ ಮಹಾನ್...

ಚಿಂತಾಮಣಿ | ವಿಶೇಷಚೇತನರಿಗೆ ಶೇ.5ರಷ್ಟೂ ಮೀಸಲಾಗದ ಅನುದಾನ; ಎಲ್ಲಿಯೂ ಕಾಣದ ರ್‍ಯಾಂಪ್‌ ವ್ಯವಸ್ಥೆ

ವಿಶೇಷಚೇತನರಿಗೆ ಅನುಕಂಪ ಬೇಡ. ಅವರಿಗೆ ಅವಕಾಶಗಳನ್ನು ರೂಪಿಸಿ ಎನ್ನುವುದು ಕೇವಲ ಬಾಯಿ...

Download Eedina App Android / iOS

X