ವಿದ್ಯಾರ್ಥಿಗಳು ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದು ಜಾಗೃತಿವಹಿಸಬೇಕು. ಲೈಸೆನ್ಸ್ ರಹಿತ ವಾಹನ ಚಾಲನೆ ಮಾಡಿ ತಮ್ಮ ಅತ್ಯಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ, ಆದಷ್ಟು ನಿಮ್ಮ ಸುತ್ತ ಮುತ್ತಲಿನ ಜನತೆಗೆ ಅಪರಾಧ ಆಗದಂತೆ ಅರಿವು ಮೂಡಿಸಿ ಎಂದು ಮೆಹಕರ್ ಪೊಲೀಸ್ ಠಾಣೆ ಪಿಎಸ್‌ಐ ಶಿವಕುಮಾರ ಬಳತೆ ಹೇಳಿದರು.
ಭಾಲ್ಕಿ ತಾಲೂಕಿನ ಮೇಹಕರ್ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಸಾಯಗಾಂವ ಗ್ರಾಮದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
“ವಿದ್ಯಾರ್ಥಿಗಳು ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ, ಮಾದಕ ದ್ರವ್ಯ ಸೇರಿದಂತೆ ಇತರೆ ಚಟುವಟಿಕೆಗಳ ಬಗ್ಗೆ ಎಚ್ಚರವಹಿಸಿದಾಗ ಮಾತ್ರ ಅಪರಾಧ ಮುಕ್ತ ಸಮಾಜ ನಿರ್ಮಾಣವಾಗಲು ಸಾಧ್ಯ. ಯಾರಾದರೂ ಅಪರಾಧ ಕೃತ್ಯಗಳಿಗೆ ಬಲವಂತವಾಗಿ ದೂಡಲು ಯತ್ನಿಸುತ್ತಿದ್ದರೆ ಪಾಲಕರಿಗೆ, ಶಿಕ್ಷಕರಿಗೆ ಇಲ್ಲವೇ ಪೊಲೀಸರಿಗೆ ಮಾಹಿತಿ ನೀಡಲು ಮುಂದಾಗಬೇಕು” ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಲೆಕ್ಕಾಧಿಕಾರಿ ವಿನೋದ್ ರಾಠೋಡ್ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿ ಹರಿರಾಮ ಅವರಿಗೆ ನೋಟ್ ಬುಕ್, ಪೆನ್ನು ವಿತರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಶಾಲಾ ಪಠ್ಯದಲ್ಲಿ ಚನ್ನಬಸವ ಪಟ್ಟದ್ದೇವರ ಜೀವನ ಚರಿತ್ರೆ ಸೇರಿಸಲು ಆಗ್ರಹ
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆ ಮುಖ್ಯಗುರು ಅಶೋಕ್ ಸ್ವಾಮಿ ಅಧ್ಯಕ್ಷತೆ ವಹಿಸಿದರು. ಮೇಹಕರ್ ಠಾಣೆ ಕ್ರೈಮ್ ಪಿಎಸ್‌ಐ ಮಾಣಿಕಪ್ಪ, ಎಎಸ್‌ಐ ಚಂದ್ರಶೇಖರ ಹಾಗೂ ಪ್ರೌಢಶಾಲೆ ಮುಖ್ಯಗುರು ಸೋಮನಾಥಪ್ಪ, ಎಸ್‌ಡಿಎಮ್‌ಸಿ ಅಧ್ಯಕ್ಷ ಗುಲಾಬ್ ಪಾಟೀಲ್ ಸೇರಿದಂತೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು. ಶಿಕ್ಷಕ ಚಂದ್ರ ನಾಯಕ ಸ್ವಾಗತಿಸಿ, ನಿರೂಪಿಸಿದರು, ಸಹ ಶಿಕ್ಷಕ ರಮೇಶ ಕಾನೇಕರ್ ವಂದಿಸಿದರು.
ವರದಿ ಮಾಹಿತಿ : ಲೋಕೇಶ ಕಾಂಬಳೆ