ನಾಯಿ ಕಚ್ಚಿದ ಗುರುತುಗಳಿರುವ ನವಜಾತ ಹೆಣ್ಣು ಶಿಶುವಿನ ಮೃತದೇಹ ಪತ್ತೆಯಾಗಿರುವ ಘಟನೆ ಕೋಲಾರ ಜಿಲ್ಲೆಯ ಅಬ್ಬತನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗುರುವಾರ ಮಗುವಿನ ಮೃತದೇಹ ಪತ್ತೆಯಾಗಿದೆ.
ಶವವನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ವೇಮಗಲ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಗುರುವಾರ ಬೆಳಗ್ಗೆ ಮಗುವನ್ನು ರಸ್ತೆಯ ಪಕ್ಕದ ಪೊದೆಗೆ ಎಸೆದಿರಬಹುದು. ಬೀದಿ ನಾಯಿಗಳು ಅದನ್ನು ರಸ್ತೆಗೆ ಎಳೆದುಕೊಂಡು ಬಂದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಹೆಣ್ಣು ಮಗು ಬೇಡ ಎಂಬ ಕಾರಣಕ್ಕೆ ನವಜಾತ ಶಿಶುವನ್ನು ಕುಟುಂಬಸ್ಥರೇ ಕೊಂದು ಹಾಕಿರುವ ಅನುಮಾನಗಳು ವ್ಯಕ್ತವಾಗಿವೆ.
ಮಗುವಿನ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಚ್ಚತನಹಳ್ಳಿ ಮುಖ್ಯರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆಗಾಗಿ ಪಡೆದುಕೊಂಡಿದ್ದಾರೆ. ಬುಧವಾರ ಜನಿಸಿದ ಶಿಶುಗಳ ಕುರಿತು ಸ್ಥಳೀಯ ಸರ್ಕಾರಿ ಆರೋಗ್ಯ ಕೇಂದ್ರ, ಖಾಸಗಿ ಆಸ್ಪತ್ರೆಗಳು ಮತ್ತು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮಾಹಿತಿ ಕೇಳಿದ್ದಾರೆ.