ಹೆಣ್ಣುಭ್ರೂಣ ಹತ್ಯೆ ಪ್ರಕರಣ ರಾಜ್ಯದಲ್ಲಿ ಗಂಭೀರ ಚರ್ಚೆ ಹುಟ್ಟು ಹಾಕಿದೆ. ಭ್ರೂಣ ಹತ್ಯೆ ಮಾಡುತ್ತಿದ್ದ ಗುಂಪಿನ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ಹೊತ್ತಿನಲ್ಲಿ, ಆಗಷ್ಟೇ ಜನಿಸಿದ್ದ ನವಜಾತ ಹೆಣ್ಣು ಶಿಶುವಿನ ಕೊರಳಿಗ ಹಗ್ಗ ಕಟ್ಟಿ ಕೊಂದು ನಿರ್ಜನ ಪ್ರದೇಶದಲ್ಲಿ ಬಿಸಾಡಿರುವ ಅಮಾನುಷ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಕ್ಯಾಸನಕೆರೆ ಗ್ರಾಮದಲ್ಲಿ ಹೆಣ್ಣು ಶಿಶುವಿನ ಮೃತದೇಹ ಪತ್ತೆಯಾಗಿದೆ. ಶಿಶುವಿನ ಕುತ್ತಿಗೆಗೆ ಹಗ್ಗ ಬಿಗಿದು, ಕೊಲೆ ಮಾಡಿ ಬಿಸಾಡಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಗಂಭೀರ ಚರ್ಚೆಯಾಗುತ್ತಿರುವ ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಲ್ಲಿ ಇಬ್ಬರಾದ ವೀರೇಶ, ಸಿದ್ದೇಶ ಕೂಡ ಇದೇ ಗ್ರಾಮದವರು ಎಂಬುದು ಗಮನಾರ್ಹ. ಇದೀಗ, ಆರೋಪಿಗಳ ಗ್ರಾಮದಲ್ಲಿಯೇ ಹೆಣ್ಣು ಶಿಶುವಿನ ಮೃತದೇಹ ಪತ್ತೆಯಾಗಿದೆ.
ಮುಳ್ಳು ಕಂಟಿಗಳಲ್ಲಿ ಬಿದ್ದಿದ್ದ ಹೆಣ್ಣು ಶಿಶುವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮಗುವನ್ನು ಪೊದೆಯಿಂದ ಹೊರತೆಗೆದಿದ್ದಾರೆ.
ಮಗುವಿನ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಸಾಸ್ವೆಹಳ್ಳಿ ಪೊಲೀಸ್ ಉಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.