ಧಾರವಾಡ ಜಿಲ್ಲೆಯಲ್ಲಿ ಒಟ್ಟು 1511 ಅಂಗನವಾಡಿ ಕೇಂದ್ರಗಳಿವೆ. ಈ ಪೈಕಿ ಕುಂದಗೋಳ ತಾಲೂಕಿನಲ್ಲಿ ಒಟ್ಟು 212 ಅಂಗನವಾಡಿ ಕೇಂದ್ರಗಳಿದ್ದು ಅದರಲ್ಲಿ ಬಾಡಿಗೆ ಕಟ್ಟಡಗಳೂ ಸೇರಿವೆ.
ಅಂಗನವಾಡಿ ಕೇಂದ್ರಗಳ ಕುರಿತು ಸಮೀಕ್ಷೆ ನಡೆಸಿದಾಗ ಹಲವಾರು ವರ್ಷಗಳಿಂದ ಇನ್ನೂ ಕೆಲವು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳೇ ಇಲ್ಲ. 212 ಕೇಂದ್ರಗಳಲ್ಲಿ 138 ಸ್ವಂತ ಕಟ್ಟಡಗಳು, 27 ಬಾಡಿಗೆ ಕಟ್ಟಡಗಳು, ಪಂಚಾಯತ್ ಕಟ್ಟಡದಲ್ಲಿ 13, ಸಮುದಾಯ ಭವನದಲ್ಲಿ 8, ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಯುವಕ ಮಂಡಲದಲ್ಲಿ 2 ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ.
ಧಾರವಾಡ ತಾಲೂಕು ವ್ಯಾಪ್ತಿಗೆ ಹೋಲಿಸಿದರೆ ಕುಂದಗೋಳ ತಾಲೂಕಿನಲ್ಲಿ ಅಷ್ಟೊಂದು ಕಳಪೆ ಅನಿಸುವುದಿಲ್ಲವಾದರೂ ಕೆಲವೊಂದು ಕಡೆಗಳಲ್ಲಿ ಶಿಥಿಲಾವಸ್ಥೆಗೆ ತಲುಪಿದ ಕಟ್ಟಡಗಳಲ್ಲೇ ಚಿಣ್ಣರು ಕೂರುತ್ತಿದ್ದಾರೆ.
ತಾಲೂಕಿನ ಹಿರೇಹರಕುಣಿ ವ್ಯಾಪ್ತಿಯಲ್ಲಿ ಒಟ್ಟು 7 ಅಂಗನವಾಡಿ ಕೇಂದ್ರಗಳು, ಅದರಲ್ಲಿ 2 ಬಾಡಿಗೆ, ಇದೇ ವ್ಯಾಪ್ತಿಯ ಚಿಕ್ಕಹರಕುಣಿಯಲ್ಲಿ ಇರುವ ಒಂದೇ ಒಂದು ಕಟ್ಟಡ. ಈ ಕಟ್ಟಡವು ಶಿಥಿಲಾವಸ್ಥೆಗೆ ತಲುಪಿದೆ.

“ಅಂಗನವಾಡಿಯಲ್ಲಿ ಹಿಟ್ಟು, ಬೆಲ್ಲ, ಬೇಳೆ ಇತ್ಯಾದಿಗಳನ್ನು ಇಲಿ, ಹೆಗ್ಗಣಗಳು ಬಂದು ತಿನ್ನುವಂತ ಅವ್ಯವಸ್ಥೆ ನಿರ್ಮಾಣವಾಗಿದೆ. ಪ್ರತಿಯೊಂದು ಆಹಾರ ಪದಾರ್ಥಗಳನ್ನು ಡಬ್ಬಿಗಳಲ್ಲಿ ಹಾಕಿ ಕಾಯ್ದುಕೊಳ್ಳಬೇಕು” ಎಂದು ಅಂಗನವಾಡಿ ಸಹಾಯಕಿ ಯಲ್ಲವ್ವ ಹಾದಿಮನಿ ಹೇಳುತ್ತಾರೆ.
ಹಿರೇಹರಕುಣಿಯ ಪಂಚಾಯತಿ ಆವರದಲ್ಲಿರುವ ಕಟ್ಟಡ ಬಹಳಷ್ಟು ಕಾವಲಿನಲ್ಲಿದ್ದು ಯಾವುದೇ ತೊಂದರೆಯಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೇಂದ್ರ 3 ರಲ್ಲಿ ಮತ್ತು ಹನುಮನಹಳ್ಳಿ ಅಂಗನವಾಡಿ ಕೇಂದ್ರಗಳಲ್ಲಿ ವ್ಯವಸ್ಥೆಗಿಂತ ಪಾಠ ಮಾಡುವ ಟೀಚರ್ ಸರಿಯಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.
ತಾಲೂಕಿನಲ್ಲಿ ಅತ್ಯಂತ ದೊಡ್ಡ ಗ್ರಾಮ ಸಂಶಿ. ಈ ಗ್ರಾಮದಲ್ಲಿ ಒಟ್ಟು 15 ಕೇಂದ್ರಗಳಲ್ಲಿ, 3 ಬಾಡಿಗೆ ಕಟ್ಟಡದಲ್ಲಿವೆ. ಪಂಚಾಯತಿ ಕಟ್ಟಡ, ಅಂಬೇಡ್ಕರ್ ಭವನ, ಅಕ್ಕಮಹಾದೇವಿ ದೇವಸ್ಥಾನದಲ್ಲಿ ಮೂರು ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ.
ಅಂಬೇಡ್ಕರ್ ಭವನದಲ್ಲಿ ನಡೆಯುವ ಕೇಂದ್ರಕ್ಕೆ ಹಳೆಯ ಕಟ್ಟಡ ಇದ್ದರೂ ಶಿಥಿಲಾವಸ್ಥೆಗೆ ತಲುಪಿರುವ ಕಟ್ಟಡದಿಂದಾಗಿ ಚಿಣ್ಣರು, ಸಹಾಯಕಿಯರು ಪರದಾಡುವಂತಾಗಿದೆ. ಕಮಡೊಳ್ಳಿ ಗ್ರಾಮದಲ್ಲಿ ಹಳೆಯ ಕಟ್ಟಡ ಹಾಳಾಗಿದ್ದು, ಕಳೆದ ಐದು ವರ್ಷಗಳಿಂದ ಸರ್ಕಾರಿ ಉರ್ದು ಶಾಲೆಯಲ್ಲಿಯೇ ನಡೆಸಲಾಗುತ್ತಿದೆ.

ತಾಲೂಕಿನ ಶಿರೂರ ಗ್ರಾಮದಲ್ಲಿರುವ ಎರಡು ಕೇಂದ್ರಗಳಲ್ಲಿ ಒಂದು ಅಂಗನವಾಡಿ ಕೇಂದ್ರ ಪಂಚಾಯತಿ ಕಟ್ಟಡದಲ್ಲೇ ನಡೆಯುತ್ತಿದೆ. ದುರಂತವೆಂದರೆ ಈ ಹಳೆಯ ಪಂಚಾಯತಿ ಕಟ್ಟಡದಲ್ಲೇ ಕಂದಾಯ ಇಲಾಖಾ ಅಧಿಕಾರಿಗಳೂ ಕಾರ್ಯನಿರ್ವಹಿಸುತ್ತಾರೆ. ಮತ್ತು ಈ ಗ್ರಾಮ ಲೆಕ್ಕಾಧಿಕಾರಿಗಳ ಪಕ್ಕದಲ್ಲಿಯೇ ಚಿಣ್ಣರು ಕುಳಿತುಕೊಳ್ಳುವ ವಾತಾವರಣ ನಿರ್ಮಾಣವಾಗಿದ್ದು ಕಳೆದ 15 ವರ್ಷಗಳಿಂದಲೂ ಮುಂದುವರೆದಿದೆ. ಒಂದು ವೇಳೆ ಲೆಕ್ಕಾಧಿಕಾರಿಗಳ ಭೇಟಿಗೆ ಜನ ಜಾಸ್ತಿ ಬಂದರೆ; ಮಕ್ಕಳನ್ನು ಪಕ್ಕದಲ್ಲಿರುವ ಈಶ್ವರ ದೇವಾಲಯಕ್ಕೆ ಕರೆದುಕೊಂಡು ಹೋಗುವ ಪರಿಪಾಠವನ್ನು ರೂಢಿಸಿಕೊಂಡಿದ್ದಾರೆ.
ಕಟ್ಟಡವಾದರೂ ಸರಿಯಾಗಿದೆಯೆ? ಎಂದು ನೋಡಿದರೆ ಕಟ್ಟಡವೂ ನೆಟ್ಟಗಿಲ್ಲ. ಈ ಕಟ್ಟಡದ ಗೋಡೆಯ ಮೇಲೆ ಬೃಹತ್ತಾಗಿ ಅರಳಿ ಮರವೊಂದು ಬೆಳೆದು ನಿಂತಿದೆ. ಮೇಲೆ ಹಾಸಲಾದ ಹಂಚುಗಳು ಒಡೆದು ಚೂರಾಗಿವೆ. ಜೋರಾಗಿ ಮಳೆ ಸುರಿಯತೊಡಗಿದರೆ ಈ ಕಟ್ಟಡದಲ್ಲಿರುವ ಎಲ್ಲರಿಗೂ ಈಶ್ವರ ದೇವಸ್ಥಾನವೇ ಆಶ್ರಯವಾಗಿದೆ.
ಈ ಕಟ್ಟಡ ಯಾವುಗ ಬೀಳುತ್ತದೆಯೊ ಎಂದು ಅಲ್ಲಿರುವ ಸ್ಥಳೀಯರಿಗೂ ಹೇಳಲೂ ಬರುವುದಿಲ್ಲ. ಒಂದು ವೇಳೆ ಕಟ್ಟಡ ಕುಸಿದು ಬಿದ್ದರೆ ಯಾರು ಹೊಣೆ? ಕಟ್ಟಡದಲ್ಲಿರುವ ಲೆಕ್ಕಾಧಿಕಾರಿಗಳು, ಗ್ರಾಮಸ್ಥರು, ಮಕ್ಕಳು, ಅಂಗನವಾಡಿ ಸಹಾಯಕಿಯರಿಗೆ ಸಮಸ್ಯೆ ಉಂಟಾದರೆ ಯಾರನ್ನು ಕೇಳುವುದು? ಇದರ ಜವಾಬ್ದಾರರು ಯಾರು? ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಹೇಳುತ್ತಾರೆ.

ಬಸ್ಸಾಪುರ, ಬೆನಕನಹಳ್ಳಿ, ಗುಡೇನಕಟ್ಟಿ ಗ್ರಾಮಗಳಲ್ಲಿರುವ ಅಂಗನವಾಡಿಗಳಲ್ಲಿ ಯಾವುದೇ ದೊಡ್ಡ ಸಮಸ್ಯೆಗಳು ಕಂಡುಬಂದಿಲ್ಲ. ಮೇಲಾಗಿ ಒಂದು ವರ್ಷದ ಹಿಂದಕ್ಕೆ ಹೋಲಿಸಿದರೆ ಈಗ ಬಹುತೇಕ ಸುಧಾರಣೆ ಆಗಿದೆ ಎಂದು ಅಂಗನವಾಡಿ ಸೇವಕಿಯರೂ ಸಂತಸದಿಂದ ಹಂಚಿಕೊಳ್ಳುತ್ತಾರೆ. ಗುಡೇನಕಟ್ಟಿಯಲ್ಲಿ ನಂದಘರ್ ಕಟ್ಟಡ ನಿರ್ಮಾಣ ಆದಮೇಲೆ ಪಾಲಕರು ಮಕ್ಕಳನ್ನು ಅಂಗನವಾಡಿಗೆ ಖುಷಿಯಿಂದ ಕಳಿಸುತ್ತಿದ್ದಾರೆ ಎಂದು ಅಂಗನವಾಡಿಯ ಸಹಾಯಕಿ ಯಲ್ಲವ್ವ ಹೂಲಿಕಟ್ಟಿ ಹೇಳುತ್ತಾರೆ.
ಇನ್ನು ಹಿರೇನೆರ್ತಿ ಗ್ರಾಮದಲ್ಲಿ ಒಟ್ಟು 4 ಅಂಗನವಾಡಿಗಳಲ್ಲಿ 2 ಬಾಡಿಗೆ ಕಟ್ಟಡ, ಅದರಲ್ಲಿ ಕೇಂದ್ರ ಸರ್ಕಾರದ ಅನುದಾನದ ಅಡಿಯಲ್ಲಿ ನಿರ್ಮಾಣವಾದ ನಂದಘರ್ ಅಂಗನವಾಡಿ ಕಟ್ಟಡದ ಕಾಮಗಾರಿ ಕಳಪೆಮಟ್ಟದಲ್ಲಿದ್ದು, ಮಳೆ ಬಂದರೆ ಸೋರುವ ಸ್ಥಿತಿಯಲ್ಲಿದೆ. ಮತ್ತೊಂದು ಕಟ್ಟಡ ಆಗಲೊ ಈಗಲೊ ಬೀಳುವ ಹಂತದಲ್ಲಿರುವ ಹಳೆಯ ಹಂಚಿನ ಮನೆಯಲ್ಲಿ ನಡೆಯುತ್ತಿದೆ. ಹಳೆ ಕಟ್ಟಡವೂ ಬೀಳುತ್ತಿದ್ದ ಕಾರಣ ಒಂದು ವರ್ಷವಾದರೂ ಹೊಸ ಕಟ್ಟಡ ನಿರ್ಮಾಣಕ್ಕೆ ಯೋಜನೆಯೂ ಹಾಕಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಈ ಎಲ್ಲ ಸಮಸ್ಯೆಗಳ ಕುರಿತು ಈ ದಿನ. ಕಾಮ್ ಜೊತೆಗೆ ಮಾತನಾಡಿದ ತಾಲೂಕು ಸಿಡಿಪಿಓ ಅಧಿಕಾರಿ ಶಾರಧಾ ನಾಡಗೌಡರ, ” ಈ ಎಲ್ಲ ಸಮಸ್ಯೆಗಳು ಗಮನಕ್ಕೆ ಬಂದಿದ್ದು ಆದಷ್ಟು ಬೇಗ ಬಗೆಹರಿಸುವಲ್ಲಿ ಕಾರ್ಯೋನ್ಮುಖರಾಗುತ್ತೇವೆ. ಕೆಲವೊಂದು ಕಡೆಗೆ ಬಜೆಟ್ ಇಲ್ಲದಿರುವ ಕಾರಣ ಕಟ್ಟಡಗಳು ನಿರ್ಮಾಣವಾಗದೆ ಅರ್ಧಕ್ಕೆ ನಿಂತಿವೆ. ತಾಲೂಕು ಸೂಪರ್ ವೈಸರ್ ಗಮನಕ್ಕೆ ತರಲಾಗುವುದು” ಎಂದರು.
ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಗಳನ್ನು ಬಗೆಹರಿಸಲು ಆಸಕ್ತಿ ವಹಿಸುವರೋ ಅಥವಾ ಹಾರಿಕೆ ಉತ್ತರವನ್ನೇ ನೀಡುತ್ತಾ ಮುಂದುವರೆಯುತ್ತಾರೋ ಎಂಬುದನ್ನು ಕಾದುನೋಡಬೇಕಿದೆ.
