ಕಮಲನಗರ ತಾಲೂಕಿನ ಚಿಕ್ಕಿ(ಯು) ಗಡಿ ಗ್ರಾಮದಿಂದ ದಾಬಕಾ(ಸಿಎಚ್) ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟು ಮೊಳಕಾಲುದ್ದ ತಗ್ಗು-ಗುಂಡಿಗಳೇ ನಿರ್ಮಾಣವಾಗಿವೆ. ಇದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಪ್ರಯಾಣಿಸಲು ಪರದಾಡುತ್ತಿದ್ದಾರೆ.
ರಾಜ್ಯದ ಗಡಿ ತಾಲೂಕಿನ ಅಂಚಿನಲ್ಲಿರುವ ಚಿಕ್ಲಿ(ಯು) ಕ್ರಾಸ್ ಮೂಲಕ ಭವಾನಿ ದಾಬಕಾ, ಖೇರ್ಡಾ(ಬಿ) ಮೂಲಕ ಔರಾದ್ ತಾಲೂಕು ಕೇಂದ್ರಕ್ಕೆ ಸಂಪರ್ಕಿಸುವ ಜಿಲ್ಲಾ ಮುಖ್ಯ ಹೆದ್ದಾರಿ ಇದಾಗಿದೆ.
ಭವಾನಿ ದಾಬಕಾ ಗ್ರಾಮದಿಂದ ಚಿಕ್ಲಿ(ಯು) ಗಡಿ ಭಾಗದವರೆಗೆ ಸುಮಾರು 6 ಕಿ.ಮೀ. ಇರುವ ರಸ್ತೆಯ ಡಾಂಬರ್ ಕಿತ್ತು ಹೋಗಿದೆ. ಅಲ್ಲಲ್ಲಿ ಭಾರೀ ಗಾತ್ರದ ಗುಂಡಿಗಳು ಬಿದ್ದಿದ್ದು, ಜಲ್ಲಿಕಲ್ಲುಗಳು ತೇಲಿವೆ. ರಸ್ತೆ ತಗ್ಗುಗಳಲ್ಲಿ ಮಳೆ ನೀರು ಸಂಗ್ರಹವಾಗಿ ಹೊಂಡಗಳಂತೆ ಕಾಣುತ್ತಿವೆ. ಇದೇ ರಸ್ತೆಯಲ್ಲಿ ಪ್ರಯಾಣಿಕರು ನಿತ್ಯ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ಇದೆ ಎಂದು ಸಾರ್ವಜನಿಕರು ಅಳಲು ತೋಡಿಕೊಳುತ್ತಿದ್ದಾರೆ.

ಸರ್ಕಾರ ರಸ್ತೆ ಅಭಿವೃದ್ಧಿಗಾಗಿ ಕೋಟ್ಯಾಂತರ ರೂಪಾಯಿ ಅನುದಾನ ಖರ್ಚು ಮಾಡುತ್ತಿದೆ. ಆದರೆ, ಸಮಪರ್ಕವಾಗಿ ಅನುಷ್ಠಾನವಾಗದ ಕಾರಣ ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಅಧೋಗತಿಗೆ ತಲುಪಿವೆ. ಇಂತಹ ದುಸ್ಥಿತಿ ನೋಡಿದರೆ ಸರ್ಕಾರದಿಂದ ಬಿಡಗಡೆಯಾದ ಹಣ ನಿಜಕ್ಕೂ ನಿರ್ದಿಷ್ಷ ಉದ್ದೇಶಕ್ಕೆ ಬಳಕೆಯಾಗುತ್ತಿಲ್ಲ ಎಂಬ ಸಣ್ಣ ಅನುಮಾನ ಕಾಡದೇ ಇರದು!
ಮಹಾರಾಷ್ಟ್ರ ಸಂಪರ್ಕ ರಸ್ತೆ :
ʼಔರಾದ್ ತಾಲೂಕು ಕೇಂದ್ರದಿಂದ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವುದು ಇದೇ ಜಿಲ್ಲಾ ಹೆದ್ದಾರಿ ರಸ್ತೆಯಾಗಿದ್ದರಿಂದ ನಿತ್ಯ ಮಹಾರಾಷ್ಟ್ರ, ಕರ್ನಾಟಕ ರಾಜ್ಯದ ಹತ್ತಾರು ಸಾರಿಗೆ ಬಸ್ ಸೇರಿದಂತೆ ಇತರ ವಾಹನಗಳು ಸಂಚರಿಸುತ್ತವೆ. ಪ್ರಯಾಣದ ವೇಳೆ ಕೆಲ ದ್ವಿಚಕ್ರ ಸವಾರರು ಗುಂಡಿಗಳಲ್ಲಿ ಬಿದ್ದು ಕೈಕಾಲು ಮುರಿದುಕೊಂಡು ಆಸ್ಪತ್ರೆಗೆ ದಾಖಲಾದ ಘಟನೆಗಳು ಜರುಗಿವೆʼ ಎಂದು ಚಿಕ್ಲಿ(ಯು) ಗ್ರಾಮದ ಅಸ್ಲಾಂ ತಿಳಿಸುತ್ತಾರೆ.

ದಾಬಕಾ ಹೋಬಳಿ ಕೇಂದ್ರ ವ್ಯಾಪ್ತಿಗೆ ಸುತ್ತಲಿನ 30ಕ್ಕೂ ಹೆಚ್ಚಿನ ಗ್ರಾಮ, ತಾಂಡಾಗಳು ಬರುತ್ತವೆ. ಹೀಗಾಗಿ ದಿನಾಲೂ ನೂರಾರು ಜನರು ವಿವಿಧ ಕೆಲಸ ಕಾರ್ಯಗಳಿಗೆ ಹಾಗೂ ಸಂತೆ ಮಾಡಲು ಹೋಬಳಿ ಕೇಂದ್ರಕ್ಕೆ ಬರುತ್ತಾರೆ. ರಸ್ತೆ ಅವ್ಯವಸ್ಥೆಯಿಂದಾಗಿ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಕಾಲಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಸ್ತೆಯಲ್ಲಿ ಗುಂಡಿ ಇದೆಯೋ? ಗುಂಡಿಯಲ್ಲಿ ರಸ್ತೆ ಇದೆಯೋ !
ʼದಾಬಕಾ-ಚಿಕ್ಲಿ ಗಡಿಯವರೆಗೆ ಇರುವ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ರಸ್ತೆಯಲ್ಲಿ ಗುಂಡಿ ಇದೆಯೋ? ಅಥವಾ ಗುಂಡಿಯಲ್ಲಿ ರಸ್ತೆ ಇದೆಯೋ ಎಂಬ ಪ್ರಶ್ನೆ ಮೂಡುತ್ತದೆ. ಅಷ್ಟರ ಮಟ್ಟಿಗೆ ಹೆಜ್ಜೆ ಹೆಜ್ಜೆಗೂ ಗುಂಡಿಗಳಿಂದ ಕೂಡಿದೆ. ಇದರಿಂದ ಮಹಿಳೆಯರು, ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ. ರಸ್ತೆ ದುರಸ್ತಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈಗಲಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಂಡು ಹೊಸ ರಸ್ತೆ ನಿರ್ಮಿಸಬೇಕುʼ ಎಂದು ದಾಬಕಾ ಗ್ರಾಮ ಪಂಚಾಯತ್ ಸದಸ್ಯ ಸಂತೋಷ ಜಾಧವ್ ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇದೆಲ್ಲ ಸಿದ್ದರಾಮಯ್ಯರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸುವ ಷಡ್ಯಂತ್ರವೇ?
ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಔರಾದ ತಾಲೂಕು ಪ್ರಭಾರಿ ಎಇಇ ಸುನೀಲ ಚಿಲ್ಲರ್ಗೆ ಈದಿನ.ಕಾಮ್ ಜೊತೆ ಮಾತನಾಡಿ, ʼನಾನು ಹೊಸದಾಗಿ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ರಸ್ತೆ ಸಮಸ್ಯೆ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಹೊಸ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆʼ ಎಂದು ತಿಳಿಸಿದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.