ಸಣ್ಣ ಪುಟ್ಟ ರೈತರಿಗೆ ನೀರಾವರಿ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೆರೆಗಳನ್ನು ಅಭಿವೃದ್ಧಿ ಪಡಿಸಲು ಕ್ರಮವಹಿಸಲಾಗುತ್ತಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬಿಸನಾಳ ಗ್ರಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ 2024-25ನೇ ಸಾಲಿನ ಅನುದಾನದಲ್ಲಿ ₹1 ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ಕೆರೆ ಸುಧಾರಣೆ ಕಾಮಗಾರಿ ಭೂಮಿಪೂಜೆ ಅಂಗವಾಗಿ ನಡೆದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
“ಬಿಸನಾಳ ಗ್ರಾಮದ ಕೆರೆ 97 ಹೆಕ್ಟೇರ್ ವಿಸ್ತಾರವಾದ ಪ್ರದೇಶ ಹೊಂದಿದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹ ಆಗುತ್ತಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು. 2013-14ರಲ್ಲಿ ಇದೇ ಕೆರೆ ಅಭಿವೃದ್ಧಿಗೆ ₹98 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿತ್ತು. ಸಣ್ಣ ನೀರಾವರಿ ಸಚಿವ ಬೋಸರಾಜ್ ಅವರ ಸಹಕಾರದಿಂದ ಈ ಬಾರಿ ಹೆಚ್ಚಿನ ಅನುದಾನ ಮಂಜೂರಾಗಿದ್ದು, ಹಂತ ಹಂತವಾಗಿ ತಾಲೂಕಿನ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುವುದು” ಎಂದು ತಿಳಿಸಿದರು.

“ತಾಲೂಕಿನ ಕೆರೆಗಳು, ಪುನರ್ವಸತಿ ಕೇಂದ್ರದ ಸ್ಥಿತಿಗತಿ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ರಸ್ತೆಗಳ ಅಭಿವೃದ್ಧಿಗೆ ಗಮನ ಹರಿಸಬೇಕಿದೆ. ಈಗಾಗಲೇ ತಾಲೂಕಿನ 170 ಗ್ರಾಮಗಳಿಗೆ ₹175 ಕೋಟಿ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರು ಕಲ್ಪಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ?: ಬಾಗಲಕೋಟೆ | ಕಳ್ಳರ ಹಾವಳಿ: ದೊಣ್ಣೆ ಹಿಡಿದು ರಾತ್ರಿ ಗಸ್ತು ತಿರುಗುತ್ತಿರುವ ಮಹಿಳೆಯರು
ಈ ವೇಳೆ ಇಲಾಖೆ ಅಧಿಕಾರಿಗಳು ಹಾಗೂ ಬಿಸನಾಳ, ಇದ್ದಲಗಿ ಗ್ರಾಮದ ಮುಖಂಡರು ಇದ್ದರು.
