ಪಡಿತರ ಚೀಟಿಯಲ್ಲಿ ತಿದ್ದುಪಡಿಗಳನ್ನು ಮಾಡಿಸಲು ಹಲವಾರು ಫಲಾನುಭವಿಗಳು ಕಾಯುತ್ತಿದ್ದಾರೆ. ಆದರೆ, ಸರ್ವರ್ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಈ ಸಮಸ್ಯೆ ಕೇಳಲು ನಾವು ಆಹಾರ ಇಲಾಖೆ ಸಚಿವ ಕೆ.ಎಚ್ ಮುನಿಯಪ್ಪ ಅವರನ್ನು ಕೇಳಬೇಕಾ ಅಂತ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕು ಆಹಾರ ಇಲಾಖೆಯಲ್ಲಿ ಸಾರ್ವನಿಕರು ಶಿರಸ್ತೇದಾರ್ ಸಂತೋಷ್ ಅವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಸೆಪ್ಟೆಂಬರ್ 23ರಿಂದ ಎಲ್ಲ ಸಮಸ್ಯೆಗಳು ಸರಿಹೋಗಲಿದೆ. ಸರ್ವರ್ ಸಮಸ್ಯೆ ಇರುವುದಿಲ್ಲ. ಗ್ರಾಹಕರು ಪಡಿತರ ಕಾರ್ಡುಗಳಲ್ಲಿನ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬಹುದೆಂದು ಜಿಲ್ಲಾ ಆಹಾರ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದರು. ಆದರೆ, ಸಮಸ್ಯೆ ಇನ್ನೂ ಮುಂದುವರೆದಿದೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ಪಡಿತರ ಕಾರ್ಡುಗಳಲ್ಲಿ ಹೊಸ ಸದಸ್ಯರ ಹೆಸರು ಸೇರ್ಪಡೆ ಸೇರಿದಂತೆ ನಾನಾ ರೀತಿಯ ತಿದ್ದುಪಡಿಗೆ ಸರ್ಕಾರ ಅವಕಾಶ ನೀಡಿದೆ. ಆದರೆ, ಸರ್ವರ್ ಸಮಸ್ಯೆ ಬಗೆಹರಿಯದ ಕಾರಣ ಹಲವಾರು ದಿನಗಳಿಂದ ಗ್ರಾಹಕರು ಮಾತ್ರ ಸೈಬರ್ ಕೇಂದ್ರಗಳಿಗೆ ಅಲೆದು ಅಲೆದು ಸಾರ್ವಜನಿಕರು ಅಸಮಾಧಾನಗೊಂಡಿದ್ದಾರೆ.
ಕಳೆದ ಎರಡು ವಾರಗಳಿಂದ ಬೀಳಗಿ ತಾಲೂಕಿನಲ್ಲಿ ಒಂದೇ ಒಂದು ಕಾರ್ಡಿನಲ್ಲಿ ತಿದ್ದುಪಡಿ ಮಾಡಿಸಲು ಸಾಧ್ಯವಾಗಿಲ್ಲ. ದಿನನಿತ್ಯ ಹಲವಾರು ಜನರು ಕಾರ್ಡ್‌ಗಳನ್ನು ಹಿಡಿದುಕೊಂಡು ಸೈಬರ್ ಕೇಂದ್ರ, ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಿಗೆ ಅಲೆಯುತ್ತಿದ್ದಾರೆ. ಆದರೆ, ಕೆಲಸವಾಗದೆ ಇಲಾಖೆ ವಿರುದ್ದ ಅಸಮಾಧಾನಗೊಂಡು ವಾಪಸ್ ಹೋಗುತ್ತಿದ್ದಾರೆ.
ಸರ್ಕಾರ ಅರ್ಹರು ಗೃಹಲಕ್ಷ್ಮೀ ಯೋಜನೆಯಿಂದ ವಂಚಿತರಾಗಬಾರದೆಂದು ಕಾರ್ಡುಗಳಲ್ಲಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳುತ್ತಿದೆ. ಮತ್ತೊಂದು ಕಡೆ ಸರಿಯಾದ ರೀತಿಯಲ್ಲಿ ಸರ್ವರ್ ಕೆಲಸ ಮಾಡದೇ ಇರುವುದರಿಂದ ಅನೇಕ ಅರ್ಹ ಫಲಾನುಭವಿಗಳು ಯೋಜನೆಯಿಂದ ದೂರ ಉಳಿಯುವಂತಾಗಿದೆ.
ವರದಿ: ಖಾಜಾಮೈನುದ್ದಿನ ತಹಶಿಲ್ದಾರ, ಸಿಟಿಜನ್ ಜರ್ನಲಿಸ್ಟ್, ಬೀಳಗಿ