ನರೇಗಾ ಕೂಲಿ ವಿಳಂಬವನ್ನು ಖಂಡಿಸಿ ಹಾಗೂ ನರೇಗಾ ಸಮರ್ಪಕ ಅನುಷ್ಠಾನಕ್ಕಾಗಿ ಒತ್ತಾಯಿಸಿ ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಸಂಘದ ಜಿಲ್ಲಾ ಸಂಯೋಜಕ ಶಂಕರ ಹೂಗಾರ ಮಾತನಾಡಿ, “ಜಿಲ್ಲೆಯ ಎಲ್ಲಾ ತಾಲೂಕಿನ ನರೇಗಾ ಕಾರ್ಮಿಕರು ಕಳೆದ ಮೂರು ತಿಂಗಳಿಂದ ಕೆಲಸ ಮಾಡುತ್ತಿದ್ದು, ಇದುವರೆಗೂ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ಮಾಡಿರುವುದಿಲ್ಲ. ಮೂರು ತಿಂಗಳ ಸಾಲ ಮಾಡಿ ದುಡಿದು ಬದುಕು ನಿರ್ವಹಿಸುತ್ತಿರುವ ನಮಗೆ ಇದೀಗ ಕಷ್ಟವಾಗುತ್ತಿದೆ. ಈ ಕೊಡಲೇ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದರು.
ನರೇಗಾ ಕೂಲಿ ಕಾರ್ಮಿಕರ ಹಕ್ಕೊತ್ತಾಯಗಳು:
1) ಮೂರು ತಿಂಗಳಿಂದ ಕೂಲಿ ಹಣ ಬಾಕಿ ಇದ್ದು, ಕೂಡಲೇ ಕೂಲಿ ಹಣವನ್ನು ಭತ್ಯೆ ಸಮೇತ ಪಾವತಿಸಬೇಕು.
2) ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದು, ನರೇಗಾದಡಿ ನೀಡುತ್ತಿರುವ 349 ರೂಗಳ ಕೂಲಿ ಸಾಕಾಗುತ್ತಿಲ್ಲ. ಏಪ್ರಿಲ್ ನಿಂದ ಕೂಲಿ ಹಣವನ್ನು 600ಗೆ ಹೆಚ್ಚಿಸಬೇಕು.
3) ನರೇಗಾ ಕೆಲಸದ ಸಮಯದಲ್ಲಿ ಕಾರ್ಮಿಕರು ಮರಣ ಹೊಂದಿದರೆ 5 ಲಕ್ಷ ರೂಗಳು ಪರಿಹಾರ ನೀಡಲು ಆದೇಶ ಮಾಡಬೇಕು.
4) ನರೇಗಾ ಕಾರ್ಮಿಕರಿಗೆ ಕೆಲಸ ನಿರ್ವಹಿಸಲು ಸಾಮಗ್ರಿಗಳನ್ನು ಪಂಚಾಯತಿ ವತಿಯಿಂದ ಪೂರೈಸಬೇಕು.
5) ನರೇಗಾದಲ್ಲಿ 200 ದಿನಗಳವರೆಗೂ ಮಾನವ ದಿನ ಆದೇಶಿಸಬೇಕು.
6) ಅನ್ಯಾಯಯುಕ್ತವಾಗಿರುವ NMMS App ಅನ್ನು ಸ್ಥಗಿತಗೊಳಿಸಬೇಕು.
7) ದುಡಿಯುವ ಕೈಗಳಿಗೆ ನಿರಂತರವಾಗಿ ಕೆಲಸ ಕಲ್ಪಿಸಬೇಕು.
ಇದನ್ನೂ ಓದಿ: ಬಾಗಲಕೋಟೆ | ವಿದ್ಯಾರ್ಥಿನಿ ಸಾವು: ಕಾಲೇಜಿನ ಲೈಸೆನ್ಸ್ ರದ್ದು ಮಾಡುವಂತೆ ಭೀಮ್ ಆರ್ಮಿ ಆಗ್ರಹ
ಈ ವೇಳೆ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಮುಖಂಡ ಮಹಾಂತೇಶ ಹೊಸಮನಿ, ಬಸವರಾಜ ಹಿರೇಮಠ, ಶಿಲ್ಪಾ, ರೇಣುಕಾ, ಶಾರದಾ, ವಿಜಯಲಕ್ಷ್ಮಿ, ಸವಿತಾ, ಮಂಜುಳಾ, ಯಲ್ಲವ್ವ, ಯಮನೂರ ಹಾಗೂ ಶಿವಕ್ಕ ಇದ್ದರು.
