ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರವು ಗುರುವಾರ (ಏ.24) ರಾತ್ರಿ ಶರಣ ಸಂಸ್ಕೃತಿಯ ವೈಭವಕ್ಕೆ ಸಾಕ್ಷಿಯಾಯಿತು. ಜಗತ್ತಿನ ಮೊದಲ ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾದ ಅನುಭವ ಮಂಟಪದ ಪರಿಕಲ್ಪನೆಯನ್ನು ಪ್ರತಿಬಿಂಬಿಸುವ ಬಸವಾದಿ ಶರಣರ ವೈಭವ ರಥಯಾತ್ರೆ, ಭಕ್ತಿಭಾವಪೂರ್ಣ ಸ್ವಾಗತದೊಂದಿಗೆ ನಗರಕ್ಕೆ ಆಗಮಿಸಿತು.
ಶರಣರ ತಾತ್ವಿಕ ಪರಂಪರೆಯನ್ನು ಸಾರುವ ಈ ಯಾತ್ರೆಗೆ ಶುಕ್ರವಾರ ಬೆಳಗ್ಗೆ ಇಳಕಲ್ ಶ್ರೀಮಠದ ಗುರುಮಹಾಂತ ಸ್ವಾಮೀಜಿಗಳು ಹಾಗೂ ಹುನಗುಂದ ಶಾಸಕ ವಿಜಯಾನಂದ್ ಎಸ್. ಕಾಶಪ್ಪನವರ ಚಾಲನೆ ನೀಡಿದ್ದು, ಶಾಸಕರು ಬಸವವಚನ ಕಟ್ಟು ಹೊತ್ತು ಮೆರವಣಿಗೆಯಲ್ಲಿ ಸಾಗಿ ಗಮನ ಸೆಳೆದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಥಯಾತ್ರೆಗೆ ಪೂಜೆ ಸಲ್ಲಿಸಿ, ಪುಷ್ಪನಮನ ಸಲ್ಲಿಸಲಾಯಿತು. ಅನೇಕ ಸಂಘಟನೆಗಳು, ಭಕ್ತರು ಮತ್ತು ವಿದ್ಯಾರ್ಥಿಗಳು ಈ ಮೆರವಣಿಗೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.
ಈ ರಥಯಾತ್ರೆಯನ್ನು ಏ.29 ಮತ್ತು 30ರಂದು ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ನಡೆಯಲಿರುವ “ಅನುಭವ ಮಂಟಪ – ಬಸವಾದಿ ಶರಣ ವೈಭವ” ಎಂಬ ರಾಜ್ಯಮಟ್ಟದ ಎರಡು ದಿನಗಳ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದೆ. ಇಳಕಲ್ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ನಂತರ, ರಥವು ಹುನಗುಂದ ನಗರದತ್ತ ಪಯಣಿಸಿತು.
ಇದನ್ನೂ ಓದಿ: ಬಾಗಲಕೋಟೆ | ಸಾಹಿತಿಗಳು ಸ್ವಾವಲಂಬಿಗಳಾಗಬೇಕು: ಶ್ರೀಧರ ಬಳಿಗಾರ