ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾದಿಗ ಸಮುದಾಯವನ್ನು ನಿರ್ಲಕ್ಷಿಸುತ್ತಿರುವುದರಿಂದ ಒಳಮೀಸಲಾತಿ ಆದೇಶ ಹೊರಡಿಸಲು ತಡ ಮಾಡುತ್ತಿದ್ದಾರೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಶಿವರಾಯ ಅಕ್ಕರಕಿ ಆರೋಪಿಸಿದರು.
ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ಮಾದಿಗ ಸಮುದಾಯದ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಿ, ಅಂಬೇಡ್ಕರ್ ವೃತ್ತದಿಂದ ಆರಂಭವಾದ ಮೆರವಣಿಗೆಯಲ್ಲಿ ಹಲಿಗೆ ಬಾರಿಸುತ್ತ ಸಾಗಿದ ಸಮುದಾಯದ ಜನರು ತಹಶೀಲ್ದಾರ್ ಕಾರ್ಯಾಲಯದವರೆಗೆ ತಹಶೀಲ್ದಾರ್ ಸುಹಾಸ್ ಇಂಗಳೆ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಶೋಷಿತ ಸಮಾಜಗಳಿಗೆ ಅಗತ್ಯವಾಗಿರುವ ಒಳಮೀಸಲಾತಿ ಕಲ್ಪಿಸುವ ಹೊಣೆಗಾರಿಕೆಯನ್ನು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ನೀಡಿದೆ. ಆದರೆ, ರಾಜ್ಯ ಸರ್ಕಾರವು ಮೀನಾಮೇಷ ಎಣಿಸುತ್ತಿದೆ” ಎಂದು ದೂರಿದರು.
“ಸರ್ಕಾರ ವಿಳಂಬನೀತಿ ಅನುಸರಿಸಿದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು. ಒಳಮೀಸಲಾತಿ ವರ್ಗೀಕರಣದ ಕುರಿತು ಮಾದಿಗ ಸಮಾಜದ ಜನಪ್ರತಿನಿಧಿಗಳು ಅಧಿವೇಶನದಲ್ಲಿ ಧ್ವನಿ ಎತ್ತಲೇಬೇಕು” ಎಂದು ಹೇಳಿದರು.

ಘಟಕದ ಅಧ್ಯಕ್ಷ ಮುತ್ತಣ್ಣ ಬೆಣ್ಣೂರ ಮಾತನಾಡಿ, “ಬೇರೆ ರಾಜ್ಯಗಳಲ್ಲಿ ಮೀಸಲಾತಿ ಜಾರಿಗೆ ತಂದಿರುವ ಕಾಂಗ್ರೆಸ್ ಪಕ್ಷಕ್ಕೆ, ಕರ್ನಾಟಕದಲ್ಲಿ ಜಾರಿಗೆ ತರಲು ಯಾವ ತೊಂದರೆಯಾಗಿದೆ. ಸಚಿವರುಗಳಾದ ಆರ್ ಬಿ ತಿಮ್ಮಾಪುರ, ಕೆ ಎಚ್ ಮುನಿಯಪ್ಪ ರಾಜೀನಾಮೆ ನೀಡಿ ಒಳಮೀಸಲಾತಿ ಜಾರಿಗೆ ತರುವ ಹೋರಾಟದಲ್ಲಿ ಭಾಗವಹಿಸಿ, ಸಮಾಜ ನಿಮ್ಮೊಂದಿಗೆ ಇರುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಭೀಮಸಿ ಕಲಾದಗಿಯವರ ನುಡಿ ನಮನ ಕಾರ್ಯಕ್ರಮ
ದಲಿತ ಸಂಘರ್ಷ ಬೆಳಗಾವಿ ಸಂಚಾಲಕ ಮಹೇಶ ಹುಗ್ಗಿ, ಮಾದಿಗ ಮೀಸಲಾತಿ ಹೋರಾಟ ಸಮಿತಿ ಬೆಳಗಾವಿ ವಿಭಾಗದ ಮುಖ್ಯಸ್ಥ ಬಸವರಾಜ ಅರವಳಿ, ಎಂಆರ್‌ಎಚ್‌ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮು ಚೂರಿ, ಮಾದಿಗೆ ಮೀಸಲಾತಿ ಹೋರಾಟ ಸಮಿತಿಯ ತಾಲೂಕು ಮುಖಂಡ ಶಿವಾನಂದ ಬಿಸನಾಳ, ರಾಜು ಮನ್ನಿಕೇರಿ, ಕೃಷ್ಣಾ ವೈ ಮಾದರ, ಸಿದ್ದು ಮಾದರ ಸೇರಿದಂತೆ ಬಹುತೇಕರು ಇದ್ದರು.