ಡೆಂಘೀ ಮಹಾಮಾರಿಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಮುದಾಯದಲ್ಲಿ ಸಹಕಾರ ಅತ್ಯಗತ್ಯವಾಗಿದ್ದು, ಡೆಂಘೀ ನಿಯಂತ್ರಣಕ್ಕೆ ಸ್ವಚ್ಛತೆ ಕೈಗೊಳ್ಳಲು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ ಕೆ ಎಂ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡೆಂಘೀ ದಿನಾಚರಣೆ ಹಾಗೂ ಡೆಂಘೀ ನಿಯಂತ್ರಣ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನಕ್ಕಾಗಿ ಆರೋಗ್ಯ ಇಲಾಖೆಯೊಂದಿಗೆ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಪಟ್ಟಣ ಪ್ರದೇಶಗಳಲ್ಲಿ ಸ್ವಯಂ ಸೇವಕರಿಂದ ಪ್ರತಿ ಶುಕ್ರವಾರ ಲಾರ್ವಾ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುವುದು. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು. ಖಾಲಿ ಜಾಗಗಳ ಮತ್ತು ಕಟ್ಟಡ ಕಾಮಗಾರಿಗಳ ನೀರು ಸಂಗ್ರಹಣ ತಾಣಗಳಲ್ಲಿ ಸೊಳ್ಳೆ ಮರಿ (ಲಾರ್ವಾ) ಕಂಡು ಬಂದರೆ ಸಂಬಂಧಿಸಿದ ಕಟ್ಟಡ ಮಾಲಿಕರಿಗೆ ನೋಟಿಸ್ ನೀಡಿ ನೀರಿನ ತಾಣಗಳನ್ನು ಸ್ವಚ್ಚಗೊಳಿಸುವಂತೆ ಸೂಚಿಸಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಆರೋಗ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಕೈ ಜೋಡಿಸಿ ಲಾರ್ವಾ ನಿರ್ಮೂಲನೆಯಲ್ಲಿ ಪಾಲ್ಗೊಳ್ಳಬೇಕು” ಎಂದು ಹೇಳಿದರು.
ಇದನ್ನೂ ಓದಿ: ಬಾಗಲಕೋಟೆ | ಸಿಬ್ಬಂದಿಗಳಿಲ್ಲದ ಬಲಕುಂದಿ ಗ್ರಾಮ ಪಂಚಾಯಿತಿಗೆ ಬೀಗ
“ಜೂನ್ ತಿಂಗಳಿನಲ್ಲಿ ಶಾಲೆಗಳು ಪುನಃ ಪ್ರಾರಂಭವಾಗುತ್ತಿದ್ದು, ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಕೀಟಜನ್ಯ ರೋಗದ ಬಗ್ಗೆ ತಿಳುವಳಿಕೆ ನೀಡುವುದರ ಜೋತೆಗೆ ಶಾಲಾ ಕಾಲೇಜುಗಳ ಸುತ್ತಮುತ್ತಲಿನ ಆವರಣವನ್ನು ಸ್ವಚ್ಚವಾಗಿಟುಕೊಳ್ಳುವಂತೆ ತಿಳುವಳಿಕೆ ನೀಡಬೇಕು. ಪೌರ ಕಾರ್ಮಿಕರಿಗೆ ಡೆಂಘೀ ರೋಗದ ಬಗ್ಗೆ ಹಾಗೂ ಡೆಂಘೀ ಜ್ವರ ನಿಯಂತ್ರಣಕ್ಕೆ ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ನಿತ್ಯ ಸ್ವಚ್ಛವಾಗಿಟ್ಟುಕೊಳ್ಳುವಂತೆ ಹಾಗೂ ಮನೆಯ ಒಳಾಂಗಣ ಹಾಗೂ ಹೊರಾಂಗಣದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವಂತೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲು” ಅಧಿಕಾರಿಗಳಿಗೆ ಸೂಚಿಸಿದರು.