ಅಬಕಾರಿ ಖಾತೆ ಸಚಿವ ಆರ್ ಬಿ ತಿಮ್ಮಾಪುರ ವಿರುದ್ಧ ಬಿಜೆಪಿ ಷಡ್ಯಂತ್ರ ರಚಿಸಿ ಹಗರಣದ ಆರೋಪ ಮಾಡಲಾಗಿದೆ ಎಂದು ಸಚಿವ ತಿಮ್ಮಾಪುರ ಅವರ ಬೆಂಬಲಿಗರು ಬಾಗಲಕೋಟೆ ನಗರದಲ್ಲಿ ಪ್ರತಿಭಟನೆ ಮಾಡಿದರು.
ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ್ದ ಸಚಿವರ ಬೆಂಬಲಿಗರು ನವನಗರದ ತಹಶೀಲ್ದಾರ್ ಕಚೇರಿಯಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನೆ ಮೆರವಣಿಗೆ ತೆರಳಿದರು, ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಗುರುಸ್ವಾಮಿ, ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ಹೆಗಡೆ ವಿರುದ್ಧ ಘೋಷಣೆ ಕೂಗಿ ಭಾವಚಿತ್ರ ದಹಿಸಿದರು. ಇಬ್ಬರು ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಬೇಕೆಂದು ಆಗ್ರಹಿಸಿದರು.
ಆರ್ ಬಿ ತಿಮ್ಮಾಪುರ ಅಭಿಮಾನಿ ಬಳಗದ ಅಧ್ಯಕ್ಷ ಶಿವಾನಂದ ಓದು ಪುಡಿ ಮಾತನಾಡಿ, “ವೈನ್ ಮರ್ಚೆಂಟ್ಸ್ ಅಸೋಸಿಯೇಷನ್‌ನಲ್ಲಿ ಗುರುಸ್ವಾಮಿ, ಗೋವಿಂದರಾಜ್ ಅವ್ಯವಹಾರ ನಡೆಸಿದ್ದಾರೆ. ತಮಗೆ ಬೇಕಾದ ಅಧಿಕಾರಿಗಳಿಗೆ ಹುದ್ದೆ ಕೊಡಿಸುವ ದುರುದ್ದೇಶದಿಂದ ಷಡ್ಯಂತ್ರ ಮಾಡಿದ್ದಾರೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸದ ಕಾರಣ ಸಚಿವರ ವಿರುದ್ಧ ಹಗರಣದ ಆರೋಪ ಮಾಡಿದ್ದಾರೆ. ಸಂಘಟನೆಯನ್ನು ಸೂಪರ್ ಸೀಡ್ ಮಾಡಿ, ಇಬ್ಬರ ವಿರುದ್ಧ ದೂರು ದಾಖಲಿಸಿ ಬಂಧಿಸಬೇಕು. ಅವರ ಮಧ್ಯದ ಲೈಸೆನ್ಸ್ ರದ್ದುಗೊಳಿಸಬೇಕು. ತಿಮ್ಮಾಪುರ ಅವರ ಮುಗ್ಧ ರಾಜಕಾರಣಿ, 40 ವರ್ಷಗಳ ರಾಜಕೀಯ ಜೀವನದಲ್ಲಿ ದುಡ್ಡು ಮಾಡಿದವರಲ್ಲ. ಕೆಲವು ಮೂರ್ಖರು ಅವರ ಹೆಸರು ಕೆಡಿಸಲು ಷಡ್ಯಂತ್ರ ಮಾಡಿದ್ದಾರೆ” ಎಂದು ಆರೋಪಿಸಿದರು.
ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ರಕ್ಷಿತಾ ಈ ಟಿ ಮಾತನಾಡಿ, “ಆರ್ ಬಿ ತಿಮ್ಮಾಪುರ ಅವರು ಹೋರಾಟದಿಂದ ಮೇಲೇ ಬಂದವರು, ಬಿಜೆಪಿಯವರಿಗೆ ಸುಳ್ಳು ಬಿಟ್ಟರೆ ಬೇರೆ ವಿಷಯ ಗೊತ್ತಿಲ್ಲ. ಹಿಂದುಳಿದ ವರ್ಗಗಳ ಸಚಿವರಿಗೆ ತೊಂದರೆ ಕೊಟ್ಟರೆ ಮಹಿಳೆಯರು ದಿಲ್ಲಿಗೆ ಬಂದು ಪ್ರತಿಭಟಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರೈಲ್ವೆ ನಿಲ್ದಾಣದಲ್ಲಿ ವಿಶೇಷ ಚೇತನರಿಗೆ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿ ಮನವಿ
“ನಮ್ಮ ಸರ್ಕಾರದ ಗ್ಯಾರಂಟಿ ಯಶಸ್ಸು ನೋಡಿ ಬಿಜೆಪಿಯವರು ಕಂಗಲಾಗಿದ್ದಾರೆ. ಸರ್ಕಾರಕ್ಕೆ ಕಿರಿಕಿರಿ ಉಂಟುಮಾಡಲು ಸಚಿವರು ಆರೋಪ ಮಾಡುತ್ತಿದ್ದಾರೆ. ದಲಿತ ನಾಯಕರೆಂಬ ಕಾರಣಕ್ಕೆ ಸಚಿವರಿಗೆ ಕಿರುಕುಳ ನೀಡಲಾಗುತ್ತಿದೆ” ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ರಾಜು ಮನ್ನಿಕೆರಿ, ಮುಖಂಡ ಗೋವಿಂದ ಕವಲಗಿ, ರಾಜು ಮೇಲಿನ ಕೇರಿ, ಅರ್ಜುನ್ ಹೊಸಮನಿ, ಮುಧೋಳ್ ಬಿಳಿಗಿ ಹುನಗುಂದ ಸೇರದಂತೆ ಜಿಲ್ಲೆಯ ನಾನಾ ಭಾಗಗಳ ಮುಖಂಡರು ಇದ್ದರು.