ಶರಣರು, ಮಹನೀಯರ ಆದರ್ಶಗಳನ್ನು ನೆನಪಿಸುವ ನಿಟ್ಟಿನಲ್ಲಿ ಸರ್ಕಾರ ಹಮ್ಮಿಕೊಳ್ಳುವ ಜಯಂತಿ ಆಚರಣೆಗಳಲ್ಲಿ ಜನಪ್ರತಿನಿಧಿಗಳ ಹಾಜರಿಯನ್ನು ಕಡ್ಡಾಯಗೊಳಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ದಸಂಸ ಜಿಲ್ಲಾ ಸಂಚಾಲಕ ಹನುಮಂತ ಚಿಮ್ಮಲಗಿ, “ನಾಡಿನ ಮಹನೀಯರು ಹಾಗೂ ಅವರ ವಿಚಾರಗಳಿಗೆ ಗೌರವ ಸಲ್ಲಿಸುವ ಸಲುವಾಗಿ ಸರ್ಕಾರ ಜಯಂತಿಗಳನ್ನು ಹಮ್ಮಿಕೊಳ್ಳುತ್ತದೆ. ಆದರೆ ಇಂತಹ ಕಾರ್ಯಕ್ರಮಗಳಿಗೆ ಜನ ಪ್ರತಿನಿಧಿಗಳೇ ಗೈರಾಗಿ ಅವರಿಗೆ ಅಪಮಾನ ಮಾಡುತ್ತಿದ್ದಾರೆ. ಇದು ಬದಲಾಗಬೇಕು. ಜನಪ್ರತಿನಿಧಿಗಳ ಕಡ್ಡಾಯವಾಗಿ ಕಾರ್ಯಕ್ರಮಗಳಿಗೆ ಹಾಜರಾಗಬೇಕು” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬಾಗಲಕೋಟೆ | ರನ್ನ ವೈಭವಕ್ಕೆ ಒಂದು ಕೋಟಿ ಅನುದಾನ: ಸಚಿವ ತಿಮ್ಮಾಪೂರ
“ನಿನ್ನೆ ನಡೆದ ಕಾಯಕ ಶರಣರ ಜಯಂತಿ ಕಾರ್ಯಕ್ರಮಕ್ಕೆ ಜಿಲ್ಲೆಯ ಜನ ಪ್ರತಿನಿಧಿಗಳು ಆಗಮಿಸಲಿಲ್ಲ. ಪ್ರೋಟೋಕಾಲ್ ಪ್ರಕಾರ ಸಚಿವರು, ಶಾಸಕರು, ವಿ.ಪ ಸದಸ್ಯರ ಹೆಸರು ಹಾಕಿ ಆಮಂತ್ರಣ ನೀಡಿದ್ದರೂ ಕ್ಯಾರೆ ಎಂದಿಲ್ಲ. ಚುನಾವಣಾ ಭಾಷಣದಲ್ಲಿ ಮಹನೀಯರ ಹೆಸರು ಹೇಳಿ ಓಟು ಗಿಟ್ಟಿಸಿಕೊಳ್ಳುವ ಅವರು, ಸರ್ಕಾರದವೇ ಆಚರಣೆ ಮಾಡುವ ಜಯಂತಿಗಳಿಗೆ ಗೈರು ಉಳಿಯುವುದು ಎಷ್ಟು ಸರಿ? ಕೂಡಲೇ ಸರ್ಕಾರ ಇದಕ್ಕೆ ಮಾರ್ಗಸೂಚಿ ರೂಪಿಸಿ ಜನಪ್ರತಿನಿಧಿಗಳು ಜಯಂತಿಗಳಿಗೆ ಹಾಜರಾಗುವುದನ್ನು ಕಡ್ಡಾಯಗೊಳಿಸಬೇಕು. ಇಲ್ಲವೇ ಅವರ ಸ್ಥಾನವನ್ನು ಅನೂರ್ಜಿತಗೊಳಿಸಬೇಕು” ಎಂದು ಒತ್ತಾಯಿಸಿದರು.
