ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಡಾ. ಬಿ ಆರ್ ಅಂಬೇಡ್ಕರ್ ಅವರನ್ನು ಅವಮಾನಿಸುವಂತಹ ಹೀನಧೈರ್ಯ ತೋರಿರುವ ಕೇಂದ್ರ ಗೃಹಸಚಿವ ಅಮಿತ್ ಶಾನನ್ನು ಈ ಕೂಡಲೇ ಅಧಿಕಾರದಿಂದ ವಜಗೊಳಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ವಿಜಯಪುರ ಜಿಲ್ಲಾ ಸಂಚಾಲಕ ಪರಶುರಾಮ ಕಾಂಬಳೆ ಹೇಳಿದರು.
ದಲಿತ ಸಂಘರ್ಷ ಸಮಿತಿ ಬಾಗಲಕೋಟೆ ಜಿಲ್ಲಾ ಸಮಿತಿಯಿಂದ ತಹಶೀಲ್ದಾರ್ ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
“ದೇಶದ ಶೋಷಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಬಡವರು ಮತ್ತು ಎಲ್ಲ ವರ್ಗದ ಮಹಿಳೆಯರು ಸಾವಿರಾರು ವರ್ಷಗಳಿಂದ ಜಾತಿ ವ್ಯವಸ್ಥೆ ಮೂಲಕ ತಾರತಮ್ಯ ನೀತಿಗೆ ಸಿಲುಕಿ ಪ್ರತಿ ಕ್ಷೇತ್ರದಲ್ಲೂ ವಂಚಿತರಾಗಿದ್ದಾರೆ. ಅಂಬೇಡ್ಕರ್ ಅವರು ತಮ್ಮ ಜೀವನದುದ್ದಕ್ಕೂ ಹೋರಾಟ ಮಾಡಿ ಸ್ವಾತಂತ್ರ್ಯಾ ನಂತರ ಭಾರತಕ್ಕೆ ಸಂವಿಧಾನ ನೀಡಿ ಶೋಷಿತ ಸಮುದಾಯಗಳ ಆಶಾಕಿರಣವಾಗಿದ್ದಾರೆ. ಅಂಥವರನ್ನು ಹಿಯಾಳಿಸುವ ಗೃಹಸಚಿವರಿಗೆ ನಾಚಿಕೆಯಾಗಬೇಕು” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸಚಿವ ಸಂಪುಟದಿಂದ ಅಮಿತ್ ಶಾ ವಜಾಕ್ಕೆ ದಸಂಸ ಆಗ್ರಹ
“ಅಮಿತ್ ಶಾ ಅವರ ಹೇಳಿಕೆಯಿಂದ ಜಾತಿವಾದಿ ಮತ್ತು ತಾರತಮ್ಯ ನೀತಿಯ ಆರ್‌ಎಸ್‌ಎಸ್ ಸಿದ್ದಾಂತ ಅರ್ಥವಾಗುತ್ತದೆ. ದೇಶದ ಸಂವಿಧಾನವನ್ನು ವಿರೋಧಿಸುತ್ತ ಬಂದಿರುವ ಮನಸು, ಸಿದ್ಧಾಂತದ ಹಿನ್ನೆಲೆಯುಳ್ಳ ಸಂಘಟನೆಗಳ ಆರ್‌ಎಸ್‌ಎಸ್ ಬೆಂಬಲದಲ್ಲಿ ರಾಜಕಾರಣ ಮಾಡುತ್ತ ಬಂದಿರುವ ಕೋಮುವಾದಿ ಮತ್ತು ಜಾತಿವಾದಿ ಬಿಜೆಪಿ ನಿಲುವನ್ನು ಈ ಮೂಲಕ ಸ್ಪಷ್ಟಪಡಿಸಿದ್ದಾರೆ. ಇದು ನಮ್ಮ ದೇಶದಲ್ಲಿ ನಡೆಯುವುದಿಲ್ಲ. ಈ ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಸವರಾಜ ದೊಡ್ಡಮನಿ, ಸದಾಶಿವ ಐನಾಪುರ, ಅಪ್ಪಾಜಿ ಕಾಂಬಳೆ, ಆರ್ ಸಿ ಚಲವಾದಿ, ಅಡಿವೆಪ್ಪ ಮರಗುದ್ದಿ, ಶಾಮ್ ಮಾದರ ಸೇರಿದಂತೆ ಇತರರು ಇದ್ದರು.