ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ಬಡ ಕುಟುಂಬಗಳನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸದೆ ಅಂತಹ ರೈತರಿಗೆ ಹಕ್ಕುಪತ್ರಗಳನ್ನು ನೀಡುವ ಕೆಲಸವಾಗಬೇಕು ಎಂದು ರಾಜ್ಯ ಭೂ ಸಂರಕ್ಷಣಾ ಸಮಿತಿ ಬಾಗಲಕೋಟೆ ಜಿಲ್ಲಾ ಘಟಕದ ಸಲಹಾ ಸಮಿತಿ ಅಧ್ಯಕ್ಷ ರಾಜು ಮನ್ನಿಕೇರಿ ಒತ್ತಾಯಿಸಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, “ಅರಣ್ಯ ಇಲಾಖೆ ಅಧಿಕಾರಿಗಳು ಮಾಡುತ್ತಿರುವ ದಬ್ಬಾಳಿಕೆ ನಿಲ್ಲಿಸಬೇಕು. ರಾಜ್ಯದಲ್ಲಿ ಬಡವರು, ಕೂಲಿಕಾರ್ಮಿಕರು, ರೈತರು, ಮಧ್ಯಮ ವರ್ಗದವರು ನೂರಾರು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ವಾಸ ಮಾಡುತ್ತಿದ್ದಾರೆ” ಎಂದು ಹೇಳಿದರು.
ಆದರೆ ಪ್ರಧಾನಿ ಇಂದಿರಾ ಗಾಂಧಿ ಆದೇಶದಂತೆ ʼಉಳುವವನೇ ಭೂಮಿಯ ಒಡೆಯʼ ಎಂದು ಆದೇಶ ಬಂದ ಸಂದರ್ಭದಲ್ಲಿ ಬಹುತೇಕರು ಅನಕ್ಷರಸ್ತರಾಗಿದ್ದರು. ಆದರೆ ನಂತರದಲ್ಲಿ ಆಯಾ ಜಿಲ್ಲಾಡಳಿತಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಜನ ಅರ್ಜಿ ಸಲ್ಲಿಸಿದ್ದು, ಅವುಗಳನ್ನು ಪುರಸ್ಕರಿಸಬೇಕು” ಎಂದು ಆಗ್ರಹಿಸಿದರು.
“ಕಂದಾಯ ಸಚಿವ ಕೃಷ್ಣ ಭೈರೇಗೌಡ ಈ ಹಿಂದೆ, ʼಬಗರ್ ಹುಕುಂ ಅಡಿ ಕೃಷಿ ಮಾಡಿಕೊಂಡಿರುವ ರೈತರ ಜಮೀನು ಹಾಗೂ ಭೂಮಿ ಅವರವರ ಹೆಸರಿಗೆ ಮಾಡಲು ಅಕ್ರಮ ಸಕ್ರಮ ಯೋಜನೆಯಡಿ ಅಧಿಕಾರ ಇದೆʼಯೆಂದು ತಿಳಿಸಿದ್ದರು. ಆದರೆ, ಇದು ಈವರೆಗೆ ಈಡೇರಿಲ್ಲ. ಹೀಗಾಗಿ ಶೀಘ್ರದಲ್ಲೇ ರಾಜ್ಯದ ವಿವಿಧ ಭಾಗದಿಂದ ಸಮಿತಿ ಪದಾಧಿಕಾರಿಗಳು ಒಗ್ಗೂಡಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸುತ್ತೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಜನಸ್ಪಂದನ ಕಾರ್ಯಕ್ರಮ; ಸಮಸ್ಯೆ ಬಗೆಹರಿಸದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ರಾಜ್ಯ ಭೂ ಸಂರಕ್ಷಣಾ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಪಾತ್ರೋಟಿ ಮಾತನಾಡಿ, “ಜಿಲ್ಲೆಯಲ್ಲಿ 8 ರಿಂದ 10 ಸಾವಿರ ಎಕರೆ ಅರಣ್ಯ ಭೂಮಿಯಲ್ಲಿರುವುದನ್ನು ಉಳಮೆ ಮಾಡಿಕೊಂಡು ಬಡ ಕುಟುಂಬಗಳು ಜೀವನ ಸಾಗಿಸುತ್ತಿದ್ದು, ಈಗ ಅರಣ್ಯ ಇಲಾಖೆಯವರು ಬಡ ಕುಟುಂಬಗಳ ಮೇಲೆ ದಬ್ಬಾಳಿಕೆ ಮಾಡುತ್ತ ಅಲ್ಲಿಂದ ಓಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ಹಲವಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ರೈತ ಕುಟುಂಬಗಳಿಗೆ ಅವಕಾಶ ಮಾಡಿಕೊಡುವ ಮೂಲಕ ಹಕ್ಕುಪತ್ರ ನೀಡಬೇಕು” ಎಂದು ಆಗ್ರಹಿಸಿದರು.
ಸಮಿತಿ ಮುಖಂಡರಾದ ರಾಜು ಸಂಗಮ, ಗುರುನಾಥ ಮ್ಯಾಗೇರಿ, ಆರ್ ಎಚ್ ಗೌಡರ, ವೈ ವೈ ತಿಮ್ಮಾಪುರ ಇದ್ದರು.
