ಕೃಷ್ಣಾ ನದಿ ತೀರದಲ್ಲಿ ಮಾನವ ಮತ್ತು ಮೊಸಳೆಗಳ ನಡುವೆ ಸಂಘರ್ಷ ಹೆಚ್ಚುತ್ತಿದೆ. ಮಾನವ ಮತ್ತು ಜಾನುವಾರುಗಳ ಮೇಲೆ ಆಗಾಗ್ಗೆ ದಾಳಿ ಮಾಡುತ್ತಿವೆ. ಇದನ್ನು ತಡೆಯಲು ಅರಣ್ಯ ಇಲಾಖೆ ನದಿ ತೀರದಲ್ಲಿ ಬೇಲಿ ಹಾಕುವ ಯೋಜನೆಯನ್ನು ಹಮ್ಮಿಕೊಂಡಿದೆ.
ಬಾಗಲಕೋಟೆ ಜಿಲ್ಲೆ ಕೃಷ್ಣ ಮತ್ತು ಘಟಪ್ರಭಾ ನದಿ ತೀರದಲ್ಲಿ ಮೊಸಳೆಗಳ ಸಂಖ್ಯೆ ಹೆಚ್ಚಾಗಿದ್ದು, ಗ್ರಾಮದ ಜನರು, ಜಾನುವಾರಗಳ ಮೇಲೆ ದಾಳಿ ನಡೆಸುತ್ತಿವೆ. ಇದರಿಂದಾಗಿ ಮಾನವರು ಮತ್ತು ಜಾನುವಾರುಗಳಿಗೆ ಅಪಾಯ ಆಗುತ್ತಿದ್ದು, ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ.
ಕೃಷ್ಣ ನದಿಯಲ್ಲಿ ಮೊಸಳೆಗಳು ಹೆಚ್ಚಾಗುತ್ತಿದ್ದು, ಆಹಾರ ಅಥವಾ ಆಶ್ರಯಕ್ಕಾಗಿ ನದಿಯಿಂದ ಹೊರಬಂದು ಮಾನವ ವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತವೆ. ಹೀಗೆ ಕಾಣಿಸಿಕೊಳ್ಳುವ ಮೊಸಳೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿದು ಆಲಮಟ್ಟಿ ಆಣೆಕಟ್ಟು ಹಿನ್ನರಿನಲ್ಲಿ ಬಿಡುತ್ತಾರೆ. ಮೊಸಳೆಗಳ ದಾಳಿಯ ಭೀತಿಯಿಂದಾಗಿ ನದಿ ತೀರದ ಗ್ರಾಮಗಳಲ್ಲಿ ಜನರು ಆತಂಕದಿಂದ ಬದುಕುತ್ತಿದ್ದಾರೆ.
ಈ ಎಲ್ಲಾ ಘಟನೆಗಳಿಂದಾಗಿ, ಕೃಷ್ಣಾ ನದಿಯ ತೀರದಲ್ಲಿ ವಾಸಿಸುವ ಜನರು ಮೊಸಳೆಗಳ ದಾಳಿಯ ಬಗ್ಗೆ ಭಯಭೀತರಾಗಿದ್ದು, ಅರಣ್ಯ ಇಲಾಖೆಯು ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ.
ಕೃಷ್ಣ ನದಿ ತೀರದ ಗ್ರಾಮಗಳಿಗೆ ಮೊಸಳೆಗಳು ಜಾನುವಾರು, ಜನರ ಮೇಲೆ ದಾಳಿ ನಡೆಸಿ ಗಾಯ ಮಾಡಿದ್ದು, ಸಾವನ್ನಪ್ಪಿರುವ ಘಟನೆಗಳು ವರದಿಯಾಗಿವೆ. ಯಾದಗಿರಿ ಜಿಲ್ಲೆಯ ಕೃಷ್ಣಾ ನದಿಯ ಹತ್ತಿರ ಕಟ್ಟಿಗೆ ತರಲು ಹೋದ ವ್ಯಕ್ತಿಯೊಬ್ಬರು ಮೊಸಳೆ ದಾಳಿಗೆ ಬಲಿಯಾಗಿದ್ದರು. ಶಹಾಪುರದಲ್ಲಿ ಕುರಿಗಳನ್ನು ನದಿಯಲ್ಲಿ ತೊಳೆಯುತ್ತಿದ್ದ ಕುರಿಗಾಯಿಯೊಬ್ಬರು ಮೊಸಳೆ ದಾಳಿಯಿಂದ ಮೃತಪಟ್ಟಿದ್ದರು.
ಮುದ್ದೇಬಿಹಾಳ ತಾಲೂಕಿನ ಕಮಲದಿನ್ನಿ ಗ್ರಾಮದ ಬಳಿ ಮೊಸಳೆ ದಾಳಿಯಿಂದ ವ್ಯಕ್ತಿ ಮತ್ತು ಎತ್ತಿಗೆ ಗಂಭೀರ ಗಾಯಗಳಾಗಿದ್ದವು. ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಬಳಿ ಮೊಸಳೆಯೊಂದು ಸೇತುವೆಯ ಮೇಲೆ ಪ್ರತ್ಯಕ್ಷವಾಗಿತ್ತು. ಈ ಘಟನೆಗಳು ಕೃಷ್ಣಾ ನದಿಯಲ್ಲಿ ಮೊಸಳೆಗಳ ಹಾವಳಿ ಹೆಚ್ಚುತ್ತಿರುವುದನ್ನು ಎತ್ತಿ ತೋರಿಸುತ್ತವೆ.
2023ರಲ್ಲಿ ಮೂರು ಜಾನುವಾರುಗಳ ಮೇಲೆ ದಾಳಿ ಮಾಡಿದ್ದು, ₹15 ಸಾವಿರ ಪರಿಹಾರ ನೀಡಲಾಗಿದೆ. ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ಮಾಡಿದ್ದು, ₹11.4 ಲಕ್ಷ ಪರಿಹಾರ ವಿತರಿಸಲಾಗಿದೆ.
2024ರಲ್ಲಿ ಮೂರು ಜಾನುವಾರುಗಳ ಮೇಲೆ ದಾಳಿ ನಡೆದಿದ್ದು, ₹15 ಸಾವಿರ ಪರಿಹಾರ ನೀಡಲಾಗಿದೆ. ಮೂರು ವ್ಯಕ್ತಿಗಳ ಮೇಲೆ ದಾಳಿ ನಡೆದಿದ್ದು, ₹1.18 ಲಕ್ಷ ಪರಿಹಾರ ವಿತರಿಸಲಾಗಿದೆ. ಈ ವರ್ಷ ಒಬ್ಬ ವ್ಯಕ್ತಿ ಮೇಲೆ ದಾಳಿ ಮಾಡಿದ್ದು, ₹60 ಸಾವಿರ ಪರಿಹಾರ ನೀಡಲಾಗಿದೆ.
ಮೊಸಳೆಗಳು ಹೆಚ್ಚುತ್ತಿರಲು ಕಾರಣ ಏನು?
ಕೃಷ್ಣಾ ನದಿಯಲ್ಲಿ ಮಾನವ-ಮೊಸಳೆ ಸಂಘರ್ಷಕ್ಕೆ ಹಲವಾರು ಕಾರಣಗಳಿದ್ದು, ಕೈಗಾರಿಕೆಗಳು, ಕೃಷಿ ಮತ್ತು ನಗರ ವಿಸ್ತರಣೆಯಿಂದಾಗಿ ನದಿ ತೀರದ ಆವಾಸಸ್ಥಾನಗಳು ನಾಶವಾಗುತ್ತಿವೆ. ಇದು ಮೊಸಳೆಗಳನ್ನು ಆಹಾರ ಮತ್ತು ಆಶ್ರಯಕ್ಕಾಗಿ ಮಾನವ ವಸತಿ ಪ್ರದೇಶಗಳಿಗೆ ಹತ್ತಿರವಾಗುವಂತೆ ಮಾಡುತ್ತದೆ. ನದಿಯಲ್ಲಿ ಮೀನು ಹಿಡಿಯುವುದು, ಬಟ್ಟೆ ತೊಳೆಯುವುದು, ಜಾನುವಾರುಗಳನ್ನು ತೊಳೆಯುವುದು ಮತ್ತು ಇತರ ಚಟುವಟಿಕೆಗಳಿಂದ ಮೊಸಳೆಗಳಿಗೆ ತೊಂದರೆಯಾಗುತ್ತದೆ.
ಮೊಸಳೆಗಳು ಮೊಟ್ಟೆ ಇಡುವ ಸ್ಥಳಗಳಲ್ಲಿ ಮಾನವರು ಹಸ್ತಕ್ಷೇಪ ಮಾಡುವುದರಿಂದ ಮೊಟ್ಟೆಗಳು ನಾಶವಾಗುತ್ತವೆ, ಇದರಿಂದಾಗಿ ಮೊಸಳೆಗಳು ತಮ್ಮ ಸಂತತಿಯನ್ನು ರಕ್ಷಿಸಿಕೊಳ್ಳಲು ಮಾನವರ ಮೇಲೆ ದಾಳಿ ಮಾಡುವ ಸಾಧ್ಯತೆಯಿದೆ. ಕೆಲವು ಸಂದರ್ಭಗಳಲ್ಲಿ, ನದಿಯಲ್ಲಿ ನೀರಿನ ಹರಿವು ಕಡಿಮೆಯಾದಾಗ ಅಥವಾ ನದಿ ತೀರದಲ್ಲಿ ಮೊಸಳೆಗಳು ಕಾಣಿಸಿಕೊಳ್ಳುತ್ತವೆ. ಆಗ ಜನರು ಭಯಭೀತರಾಗಿ ಮೊಸಳೆಗಳ ಮೇಲೆ ದಾಳಿ ಮಾಡುತ್ತಾರೆ, ಇದರಿಂದಾಗಿ ಸಂಘರ್ಷ ಉಂಟಾಗುತ್ತದೆ. ಕೆಲವರು ಮೊಸಳೆಗಳನ್ನು ನೋಡಿದರೂ ನಿರ್ಲಕ್ಷ್ಯ ವಹಿಸುತ್ತಾರೆ, ಅಥವಾ ಅವುಗಳ ಹತ್ತಿರ ಹೋಗಲು ಪ್ರಯತ್ನಿಸುತ್ತಾರೆ, ಇದರಿಂದಾಗಿ ದಾಳಿಯ ಸಾಧ್ಯತೆ ಹೆಚ್ಚುತ್ತದೆ.
ಈ ಕುರಿತು ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್ ಪಿ “ಮಾನವ ಮೊಸಳೆ ಸಂಘರ್ಷ ತಡೆಗಟ್ಟಲು ವಿಪತ್ತು ನಿರ್ವಹಣಾ ಕೋಶದಿಂದ ₹70.53 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಮೊದಲು ಹಂತದಲ್ಲಿ ಐದು ಕಡೆ ಬೇಲಿ ನಿರ್ಮಾಣ ಮಾಡಲು ಟೆಂಡರ್ ಕರೆಯಲಾಗಿದೆ. ನದಿ ತೀರದಿಂದ 10-15 ಅಡಿ ದೂರದಲ್ಲಿ ಬೇಲಿ ನಿರ್ಮಾಣ ಮಾಡಲಾಗುವುದು. ಇದರಿಂದ ಜನರು ಮೊಸಳೆಗಳ ಭಯವಿಲ್ಲದೆ ಕೃಷಿ ಚಟುವಟಿಕೆಗಳನ್ನು ಮತ್ತು ಕೂಡಲ ಸಂಗಮ ನದಿಯಲ್ಲಿ ಸ್ನಾನ ಮಾಡಲು ಅನುಕೂಲವಾಗುತ್ತದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ದಲಿತ ಪ್ರಾಧ್ಯಾಪಕರಿಗೆ ತಾರತಮ್ಯ: ಬೆಂವಿವಿ ಕುಲಪತಿಯನ್ನು ಹಿಂತೆಗೆದುಕೊಳ್ಳಲು ಚಂದ್ರು ಪೆರಿಯಾರ್ ಆಗ್ರಹ
“ತುಕ್ಕು ಹಿಡಿಯದ ಸ್ಟೀಲ್ ಬಳಕೆ ಮಾಡಿ 4 ರಿಂದ 5 ಕಿ.ಮೀ. ವರೆಗೆ ಬೇಲಿ ನಿರ್ಮಾಣಕ್ಕೆ ತುಕ್ಕು ಹಿಡಿಯದ ಸ್ಟೀಲ್ ಬಳಸಲಾಗುವುದು. ಅಗತ್ಯವಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕಡೆ ಬೇಲಿ ನಿರ್ಮಿಸಲಾಗುವುದು” ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಮಾನವ-ವನ್ಯಜೀವಿ ಸಂಘರ್ಷವನ್ನು ತಡೆಗಟ್ಟಲು, ಮೊಸಳೆಗಳ ಆವಾಸಸ್ಥಾನಗಳನ್ನು ಸಂರಕ್ಷಿಸುವುದು ಮತ್ತು ಮಾನವರು ಮೊಸಳೆಗಳಿರುವ ಪ್ರದೇಶಗಳಲ್ಲಿ ಜಾಗರೂಕರಾಗಿರುವುದು ಮುಖ್ಯವಾಗಿದೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.