ಬಾಗಲಕೋಟೆಯ ಘಟಪ್ರಭಾ ನದಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಿಂದಾಗಿ ನದಿ ಬರಡಾಗುವ ಭೀತಿ ಎದುರಾಗಿದೆ. ಅಕ್ರಮ ಮರಳು ದೋಚಣೆಯನ್ನು ತಕ್ಷಣ ನಿಲ್ಲಿಸಲು ಕ್ರಮವಹಿಸಬೇಕು ಎಂದು ರೈತ ಸಂಘ ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಸಿದೆ.
ಇದೇ ರೀತಿ ಅಕ್ರಮ ಮರಳುಗಾರಿಕೆ ಮುಂದುವರೆದರೆ ಕೇವಲ ಒಂದೇ ತಿಂಗಳಲ್ಲಿ ನದಿಯ ಸಂಪೂರ್ಣ ಮರಳು ಬರಿದಾಗುವ ಸಾಧ್ಯತೆ ಇದೆ. ಇದರಿಂದ ನಗರದ ಜನತೆಗೆ, ತಾಲೂಕಿನ ರೈತಾಪಿ ವರ್ಗಕ್ಕೆ ತುಂಬಾ ಸಂಕಷ್ಟ ಎದುರಾಗಲಿದೆ. ಅಲ್ಲದೆ ಪರಿಸರಕ್ಕೆ ಕೂಡಾ ಭಾರೀ ಹಾನಿಯಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದರು.
ಮುಧೋಳ ತಾಲೂಕಿನ ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ, ಮಹೇಶಗೌಡ ಪಾಟೀಲ, ಸುರೇಶ್ ಚಿಂಚಲಿ, ಸುಭಾಷ ಶಿರಭೂರ, ಹನುಮಂತ ನಬಾಬ, ನ್ಯಾಯವಾದಿ ಲಕ್ಕಪ್ಪ ಸುನಗದ, ಯಲಪ್ಪ ಹೆಗಡೆ ಸೇರಿದಂತೆ ಹಲವಾರು ರೈತ ಮುಖಂಡರು ತಹಶೀಲ್ದಾರ್ ಮಹದೇವ ಸನಮುರಿ ಮೂಲಕ ವಿವಿಧ ಇಲಾಖೆಗಳಿಗೆ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ?: ಬಾಗಲಕೋಟೆ | ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣ; ಆರೋಪಿಗಳ ಗಡಿಪಾರಿಗೆ ದಲಿತ ಸಂಘಟನೆ ಆಗ್ರಹ
“ಅಕ್ರಮ ಮರಳು ಸಾಗಾಣಿಕೆಯಿಂದ ನದಿಯ ಆರೋಗ್ಯ ಹದಗೆಡುವುದರ ಜೊತೆಗೆ, ಜಲಚರಗಳಿಗೆ, ಪ್ರಾಣಿ ಪಕ್ಷಿಗಳಿಗೆ, ಜನ-ಜಾನುವಾರಗಳಿಗೆ ದೊಡ್ಡ ಅಪಾಯ ಎದುರಾಗುವ ಸಂಭವವಿದೆ. ಈ ಸಮಸ್ಯೆಗೆ ಸರ್ಕಾರ ಕೂಡಲೇ ಸ್ಪಂದಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ಅಕ್ರಮ ಮರಳು ದೋಚಣೆ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಘಟಪ್ರಭಾ ನದಿ ಸಂಪೂರ್ಣವಾಗಿ ಮಾಯವಾಗಿ ಶೀಘ್ರದಲ್ಲೇ ಇತಿಹಾಸದ ಪುಟಗಳಲ್ಲಿ ಮಾತ್ರ ಸಿಗುವ ಸ್ಥಿತಿ ಬರಬಹುದು.
ಈ ಸಮಸ್ಯೆಯನ್ನು ನಿರ್ಲಕ್ಷಿಸುವಂತಿಲ್ಲ. ನದಿಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದ್ದು ನಾಗರಿಕರೂ ಸಹ ಧ್ವನಿ ಎತ್ತುವ ಮೂಲಕ ಪರಿಸರ ಸಂರಕ್ಷಣೆಯ ಜೊತೆಗೆ ನಮ್ಮ ಜೀವನಾಡಿಯಾಗಿರುವ ನದಿಯನ್ನು ಸಂರಕ್ಷಿಸಲು ಕಾರ್ಯೋಮುಖರಾಬೇಕಾಗಿದೆ” ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿ ಕಳವಳ ವ್ಯಕ್ತಪಡಿಸಿದರು.
