ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರಿ ಯೋಜನೆಗಳು ರೈತರಿಗೆ ತಲುಪದೇ ಇರುವ ಬೆಳವಣಿಗೆ ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ಬೆಳಕಿಗೆ ಬಂದಿದೆ.
“ರೈತರಿಗೆ ಅನುಕೂಲ ಆಗಲೆಂದು ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಸರ್ಕಾರ ರೈತರಿಗೆ ಕೆಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಇಲಾಖೆಯ ಮೂಲಕ ರೈತರಿಗೆ ತಲುಪಿಸುವಂತಹ ಕೆಲಸ ಮಾಡಲು ಸೂಚಿಸಿದೆ. ಕೆಲ ಅಧಿಕಾರಿಗಳು ಇದನ್ನೇ ಬಂಡವಾಳ ಮಾಡಿಕೊಂಡು ಸರ್ಕಾರಿ ಯೋಜನೆಗಳನ್ನು ರೈತರಿಗೆ ತಲುಪಿಸದೆ ದಿಕ್ಕು ತಪ್ಪಿಸುವಂಥ ಕೆಲಸ ಮಾಡಿದ್ದಾರೆ” ಎಂದು ನೊಂದ ರೈತ ಶ್ರೀಶೈಲ ದಳವಾಯಿ ಆರೋಪಿಸಿದ್ದಾರೆ.
“ರೈತರ ಹೆಸರಿನಲ್ಲಿ ಮಂಜೂರಾದ ಯೋಜನೆಯನ್ನು ರೈತರಿಗೆ ತಲುಪಿಸದೆ ಬೀಳಗಿಯ ಹೆಸ್ಕಾಂ ಇಲಾಖೆಯ ಅಧಿಕಾರಿಗಳು ಅನ್ಯಾಯ ಎಸಗಿದ್ದಾರೆ” ಎಂದು ದೂರಿದರು.
“2018ರಲ್ಲಿ ಜನರಲ್ ಸ್ಕೀಮ್‌ನಡಿ ಬೀಳಗಿ ಪಟ್ಟಣದ ರವಿ ಶಿವನಗೌಡ ಪಾಟೀಲ್, ಶ್ರೀಶೈಲ ರಾಮಣ್ಣ ದಳವಾಯಿ, ಸೋಮಯ್ಯ ಸಿದ್ದಯ್ಯ ಪರಡಿಮಠ, ರಾಮಪ್ಪ ಶಿವಪ್ಪ ಕಣ್ಣಿ ಎಂಬ ನಾಲ್ಕು ಮಂದಿ ರೈತರಿಗೆ ʼಟ್ರಾನ್‌ಫಾರ್ಮರ್ ಸರ್ಕ್ಯೂಟ್ʼ(ಟಿಸಿ) ಸಹಿತ ವಿದ್ಯುತ್ ಸಂಪರ್ಕ ಮಾಡಿಕೊಡಲು ಆದೇಶ ಆಗಿತ್ತು. 2018ರಲ್ಲಿ ಬೀಳಗಿ ಹೆಸ್ಕಾಂ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ, ಎ ಎಚ್ ಅತ್ತಾರ ಮತ್ತು ಪ್ರತಿಭಾ ನಾವಲಗಿ ಇವರುಗಳು ಈಗಾಗಲೇ, ರೈತರ ಹೆಸರಿನಲ್ಲಿ ಅಂದಾಜು ₹9 ಲಕ್ಷಕ್ಕೂ ಅಧಿಕ ಮೊತ್ತದ ವಿದ್ಯುತ್ ಸಲಕರಣೆಗಳನ್ನು ಖರೀದಿಸಿದ್ದಾರೆ” ಎಂದು ಹೇಳಿದರು.

“ವಿದ್ಯುತ್ ಸಂಪರ್ಕಕ್ಕೆ ಸಲಕರಣಗಳನ್ನು ಸಂಪರ್ಕಿಸಿ ಸುಮಾರು 6 ವರ್ಷ ಕಳೆದರೂ ಕೂಡ ಈವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ. ನೆಪ ಮಾತ್ರಕ್ಕೆ ಕೆಲವೆಡೆ ಕಂಬಗಳನ್ನು ನಿಲ್ಲಿಸಿದ್ದಾರೆ. ಈವರೆಗೂ ಸಂಪರ್ಕ ಕಲ್ಪಿಸಿಲ್ಲ. ಟಿಸಿ ಅಳವಡಿಸಿಲ್ಲ. ಹಾಗಾದರೆ ವಿದ್ಯುತ್ ಸಲಕರಣೆಗಳನ್ನು ಖರೀದಿಸಿದ್ದು ಯಾರಿಗೆ? ಆ ಟಿಸಿ ವಿದ್ಯತ್ ಸಲಕರಣೆಗಳು ಎಲ್ಲಿ ಹೋದವು? ಸುಮಾರು 6 ವರ್ಷ ಕಳೆಯುತ್ತ ಬಂದರೂ ಅಧಿಕಾರಿಗಳು ಮೌನ ವಹಿಸಿದ್ದು ಯಾಕೆ? ಎಂಬುದೇ ತಿಳಿದಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ರೈತರು ಹಲವು ಬಾರಿ ಹೆಸ್ಕಾಂ ಇಲಾಖೆ ಕಚೇರಿಗೆ ಹೋಗಿ ಲೋಣಿಯವರಿಗೆ, ಎ ಎಚ್ ಅತ್ತಾರ ಮತ್ತು ಪ್ರತಿಭಾ ನಾವಲಗಿಯವರಿಗೆ ಕೇಳಿದರೆ ಮಾಡೋಣ, ನೋಡೋಣವೆಂದು ಹಾರಿಕೆ ಉತ್ತರ ನೀಡುತ್ತಿದ್ದಾರೆಯೇ ಹೊರತು ಕೆಲಸ ಮಾಡಿಕೊಡುತ್ತಿಲ್ಲ. 2018ರಿಂದ ಈವರೆಗೆ ಬೀಳಗಿ ಹೆಸ್ಕಾಂ ಇಲಾಖೆಗೆ ಬಹುತೇಕ ಅಧಿಕಾರಿಗಳು ಬಂದು ಕಾರ್ಯ ನಿರ್ವಹಿಸಿದ್ದಾರೆ. ಈ ವಿಷಯವನ್ನು ಅವರೆಲ್ಲರ ಗಮನಕ್ಕೂ ತಂದಿದ್ದೇವೆ. ಆದರೆ ಅವರು ತಲೆ ಕೆಡಿಸಿಕೊಳ್ಳುತ್ತಿಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಶೇ. 40ರಷ್ಟು ಬಡ್ಡಿ ದಂಧೆ; ಕ್ರಮಕ್ಕೆ ಮನವಿ
“ರೈತರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಿದ್ಯುತ್ ಸಲಕರಣೆಗಳನ್ನು ಬಿಡುಗಡೆ ಮಾಡಿದ್ದು, ರೈತರಿಗೆ ತಲುಪಿಸದೆ ದಿಕ್ಕು ತಪ್ಪಿಸಿದ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ನೊಂದ ರೈತರಿಗೆ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದರು.
ಈ ವೇಳೆ ರಾಮಣ್ಣ ಶಿವಪ್ಪ ಕಣ್ಣಿ, ಪ್ರಕಾಶ್ ಮಾನಿಂಗಪ್ಪ ಕಟಗೇರಿ, ಗುರುಲಿಂಗಯ್ಯ ಪರಡಿಮಠ ಸೇರಿದಂತೆ ಇತರರು ಇದ್ದರು.
ವರದಿ: ಈ ದಿನ.ಕಾಮ್ ಮೀಡಿಯಾ ಜರ್ನಲಿಸ್ಟ್ ರಾಜು ಬುಕಿಟಗಾರ