ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಇಳಕಲ್ ತಾಲೂಕಿನಲ್ಲಿ ಅತಿಕ್ರಮವಾಗಿ ನಿರ್ಮಾಣ ಮಾಡಿರುವ ಗ್ರಾನೈಟ್ ಫ್ಯಾಕ್ಟರಿ ಹಾಗೂ ಮಾರಾಟ ಮಳಿಗೆಗೆಳನ್ನು ತೆರವುಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿತು.
ಬಾಗಲಕೋಟೆಯ ಇಳಕಲ್ ತಾಲೂಕು ಪೈಕಿ ರಿ ಸನಂ.75 ರಲ್ಲಿ ಇಳಕಲ್‌ನಿಂದ ಹೊಲಗೇರಿಗೆ ಹೋಗುವ ರಸ್ತೆ ಹಾಗೂ ಇದರ ಉತ್ತರಕ್ಕೆ ಹೊಂದಿಕೊಂಡಿರುವ ಸರ್ಕಾರಿ ಹಳ್ಳವನ್ನು ಒತ್ತುವರಿ ಮಾಡಿ ಗಾಯತ್ರಿ ಗ್ರಾನೈಟ್ ಫ್ಯಾಕ್ಟರಿಯವರು ಕಟ್ಟಡ ಕಾಂಪೌಂಡ್ ಕಟ್ಟಿ ಅತಿಕ್ರಮ ಮಾಡಿದ ಕುರಿತು ಸಮರ್ಪಕ ದಾಖಲೆಗಳೊಂದಿಗೆ ಕರವೇ ತಾಲೂಕು ಘಟಕದ ವತಿಯಿಂದ ಇಳಕಲ್ ತಹಶೀಲ್ದಾರರಿಗೆ ದೂರು ಸಲ್ಲಿಸಲಾಗಿತ್ತು. ಆದರೆ ತಹಶೀಲ್ದಾರರು ನಿರ್ಲಕ್ಷ್ಯ ತೋರಿದ ಕಾರಣ 2024ರ ಅಕ್ಟೋಬರ್ 14ರಂದು ತಹಶೀಲ್ದಾರ್ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಆರಂಭಿಸಲಾಗಿತ್ತು.
ಈ ಅತಿಕ್ರಮಣವನ್ನು ತೆರವುಗೊಳಿಸುವ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳವುದಾಗಿ ಬಾಗಲಕೋಟೆ ವಿಭಾಗೀಯ ಅಧಿಕಾರಿಗಳು ಭರವಸೆ ನೀಡಿದ ನಂತರ ಧರಣಿ ಸತ್ಯಾಗ್ರಹವನ್ನು ಅ.20ರಂದು ಕೈಬಿಡಲಾಗಿತ್ತು.
ತಾಲೂಕು ಭೂಮಾಪಕರು ನೀಡಿದ ವರದಿ ಹಾಗೂ ಗುರುತಿಸಿದ ಅತಿಕ್ರಮಣದ ಹದ್ದಿನಲ್ಲಿ ಕಟ್ಟಿರುವ ಕಟ್ಟಡಗಳನ್ನು ತೆರವುಗೊಳಿಸಲು ಇಳಕಲ್ ನಗರಸಭೆ ಸಿಬ್ಬಂದಿಗಳು ಕಳೆದ ಜನವರಿ 2 ರಂದು ಕಾಂಪೌಂಡಿನಲ್ಲಿ ಆಕಳುಗಳಿವೆ ಎಂದು ಕಾರಣ ನೀಡಿ ಅವುಗಳ ಸ್ಥಳಾಂತರಕ್ಕೆ 7 ದಿನಗಳ ಕಾಲಾವಧಿ ಕೇಳಿ ಖುದ್ದು ಗಾಯತ್ರಿ ಗ್ರಾನೈಟ್ ಫ್ಯಾಕ್ಟರಿಯ ಮಾಲೀಕರು ಪೌರಾಯುಕ್ತರಲ್ಲಿ ವಿನಂತಿಸಿಕೊಂಡಿದ್ದರು.
ಗಾಯತ್ರಿ ಗ್ರಾನೈಟ್ ಫ್ಯಾಕ್ಟರಿಯವರಿಂದ ಸರಕಾರಿ ಹಳ್ಳ ಒತ್ತುವರಿಯಾಗಿರುವುದು ಲಗತ್ತಿಸಿರುವ ದಾಖಲೆಗಳು ಮತ್ತು ಈ ಪತ್ರದ ಮುಖೇನ ಸ್ಪಷ್ಟವಾಗಿ ಸಾಬೀತಾಗಿದ್ದು, ಖುದ್ದು ಗಾಯತ್ರಿ ಗ್ರಾನೈಟ್ ಫ್ಯಾಕ್ಟರಿಯ ಮಾಲೀಕರೇ ಒಪ್ಪಿಕೊಂಡು ಕೇಳಿದ್ದ ಕಾಲಾವಕಾಶ ಮುಗಿದು ಹೋಗಿದ್ದರೂ ಸರ್ಕಾರಿ ಹಳ್ಳ ಒತ್ತುವರಿಯನ್ನು ತೆರವುಗೊಳಿಸದೇ ಇರುವುದು ಅಧಿಕಾರಿಗಳು ಹಾಗೂ ಅತಿಕ್ರಮಣದಾರರ ನಡುವೆ ಆಂತರಿಕ ಹೊಂದಾಣಿಕೆ ಆಗಿರಬಹುದು ಎನ್ನುವ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಕಾರಣ ಸದರಿ ಅತಿಕ್ರಮಣವನ್ನು 10 ದಿನಗಳಲ್ಲಿ ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಬೇಕು ಎಂದು ಕರವೇ ಒತ್ತಾಯಿಸಿತು.
ಈ ಸುದ್ದಿ ಓದಿದ್ದೀರಾ?: ಬಾಗಲಕೋಟೆ | ರೈತರ ಅನುಕೂಲಕ್ಕಾಗಿ ಕೆರೆಗಳ ಅಭಿವೃದ್ಧಿಗೆ ಕ್ರಮ: ಶಾಸಕ ವಿಜಯಾನಂದ ಕಾಶಪ್ಪನವರ
ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮೇಶ ಅಂಬಿಗೇರ, ತಾಲೂಕು ಅಧ್ಯಕ್ಷ ಗಣೇಶ ನಾಯಕ, ವಿದ್ಯಾರ್ಥಿ ಘಟಕದ ಮಶಾಕ್ ಸಂತಿ ಶಿರೂರ ಹಾಗೂ ಇತರರು ಇದ್ದರು.
