ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ಉದ್ಯಾನ ಹಾಗೂ ಸಾರ್ವಜನಿಕ ಸೌಲಭ್ಯಕ್ಕಾಗಿ ಮೀಸಲಿಟ್ಟ ಜಾಗಗಳು ಕೆಲ ಪ್ರಭಾವಿಗಳ ಪಾಲಾಗುತ್ತಿದ್ದು, ಕೂಡಲೇ ಅತಿಕ್ರಮಣ ತೆರವುಗೊಳಿಸಿ ಸಾರ್ವಜನಿಕ ಆಸ್ತಿ ರಕ್ಷಣೆಗೆ ಪಟ್ಟಣ ಪಂಚಾಯಿತಿ ಮುಂದಾಗಬೇಕು ಎಂದು ಕರವೇ ಕಾರ್ಯಕರ್ತರು ಪಟ್ಟಣ ಪಂಚಾಯತ್ ಎದುರು ಪ್ರತಿಭಟನೆ ಮಾಡಿ ಬಳಿಕ ಪಂಚಾಯತಿ ಮುಖ್ಯ ಅಧಿಕಾರಿಗೆ ಮನವಿ ಸಲ್ಲಿಸಿದರು.
ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಮಾತನಾಡಿ, “ನಾಗರಿಕ ಸೌಲಭ್ಯ ಹಾಗೂ ಉದ್ಯಾನವನ ಜಾಗಗಳು ಪ್ರಭಾವಿಗಳ ಪಾಲಾಗಿವೆ. ಬಡಾವಣೆಯನ್ನು ಎನ್‌ಎ ಮಾಡುವಾಗ ಅಲ್ಲಿನ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸಲು ಕೆಲ ಜಾಗಗಳನ್ನು ಮೀಸಲಿಡಲಾಗುತ್ತದೆ. ಆದರೆ, ಸಾರ್ವಜನಿಕ ಆಸ್ತಿಯನ್ನು ಕೆಲವರು ಕಬಳಿಸಿದ್ದಾರೆ. ಭೂಮಾಫಿಯಾಗೆ ಕೆಲ ಅಧಿಕಾರಿಗಳು ಬೆಂಬಲವಾಗಿ ನಿಂತಂತೆ ಕಾಣುತ್ತಿದೆ” ಎಂದು ಆರೋಪಿಸಿದರು.
“ಯಾರದೇ ಪ್ರಭಾವಕ್ಕೂ ಒಳಗಾಗದೆ ಅತಿಕ್ರಮಣ ಮಾಡಿದ ಸಾರ್ವಜನಿಕ ಆಸ್ತಿಯನ್ನು ತೆರವುಗೊಳಿಸಬೇಕು. ಒಂದು ವೇಳೆ 15 ದಿನದಲ್ಲಿ ಕಾರ್ಯಾಚರಣೆ ನಡೆಸದಿದ್ದರೆ ತೀವ್ರ ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ದಿವ್ಯಾಂಗರ ಪ್ರತಿಭೆಗಳಿಗೆ ಪ್ರೋತ್ಸಾಹವಿದ್ದಲ್ಲಿ ಉತ್ತಮ ಸಾಧನೆ ಸಾಧ್ಯ – ಬಿಷಪ್ ಜೆರಾಲ್ಡ್ ಲೋಬೊ
ಹುನಗುಂದ ಮತಕ್ಷೇತ್ರದ ಕರವೇ ಅಧ್ಯಕ್ಷ ರಂಝಾನ್ ನದಾಫ್, ಇಳಕಲ್ ಘಟಕದ ಅಧ್ಯಕ್ಷ ಮಹಾಂತೇಶ ವಂಕಲ ಕುಂಟಿ, ಹುನಗುಂದ ಘಟಕದ ರೋಹಿತ ಬಾರಕೇರ, ಕಾರ್ಮಿಕ ಘಟಕದ ಅಧ್ಯಕ್ಷ ಸೈಯದ್ ಬೇಪಾರಿ, ಸಂಗು ಗ್ವಾತಗಿ, ಅಶೋಕ ಪೂಜಾರಿ, ಬಸವರಾಜ ಅಂಬಿಗೇರ, ಚಂದ್ರು ಹಳ್ಳಿ, ಶರಣಪ್ಪ ಹುಗ್ಗೆನ್ನವರ ಸೇರಿದಂತೆ ಇತರರು ಇದ್ದರು.