ಶರಣರ ನಾಡಿನಲ್ಲಿ ಕೆ ಎಸ್ ಈಶ್ವರಪ್ಪನವರು ತಮ್ಮ ಸ್ವಾರ್ಥಕ್ಕಾಗಿ ಹಿಂದುಳಿದ, ದಲಿತ ಸಮುದಾಯಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಯುವರೈತ ಮುಖಂಡ ಡಾ. ಯಲ್ಲಪ್ಪ ಹೆಗಡೆ ಆರೋಪಿಸಿದರು.
ಬಾಗಲಕೋಟೆ ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಈಶ್ವರಪ್ಪನವರು ಪ್ರಸಕ್ತ ಹಿಂದುಳಿದ, ದಲಿತ ಹಾಗೂ ಸಮಗ್ರ ಹಿಂದೂ ಸಮಾಜದ ಸಮಸ್ಯೆಗಳು ಮತ್ತು ಸವಾಲುಗಳ ಚಿಂತನ-ಮಂಥನ ಸಭೆ ಮಾಡುವ ಬದಲು, ಪ್ರಸಕ್ತ ರಾಜಕಾರಣದಲ್ಲಿ ಕೆ ಎಸ್ ಈಶ್ವರಪ್ಪನವರ ಕುಟುಂಬವು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳ ಚಿಂತನ-ಮಂಥನ ಸಭೆ ಮಾಡಿದರೆ ಉಪಯುಕ್ತವಾಗುತ್ತಿತು” ಎಂದು ಟೀಕಿಸಿದರು.
“ಶ್ಯಾಮ್ ಪ್ರಸಾದ್ ಮುಖರ್ಜಿಯವರ ರಾಜಕೀಯ ಸಿದ್ಧಾಂತ ಹೊಂದಿರುವ ತಾವು ಅಧಿಕಾರದಿಂದ ವಂಚಿತರಾದ ಕೂಡಲೇ ದೇವರಾಜ್ ಅರಸು, ಬುದ್ದ, ಬಸವ, ಅಂಬೇಡ್ಕರ್, ಚನ್ನಮ್ಮ, ರಾಯಣ್ಣ ಇನ್ನೂ ಮುಂತಾದ ಮಹನೀಯರ ಭಾವಚಿತ್ರಗಳನ್ನು ತಮ್ಮ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಬಳಸಿಕೊಂಡಿರುವುದು ಆಶ್ಚರ್ಯವಾಗುತ್ತದೆ. ಆದರೂ ಇದು ಸಂತಸದ ವಿಚಾರ. ಈ ಮಹನೀಯರ ಆದರ್ಶಗಳನ್ನು ಅಳವಡಿಸಿಕೊಂಡು, ನಂತರ ಭಾವಚಿತ್ರಗಳನ್ನು ಬಳಸಿದ್ದಿದ್ದರೆ ಸೂಕ್ತವಾಗಿರುತ್ತಿತ್ತು” ಎಂದರು.
“ಈಶ್ವರಪ್ಪನವರು ಅವಕಾಶವಾದಿ. ಸ್ಥಿರ ಮನಸ್ಥಿತಿಯ ನಾಯಕತ್ವವಿಲ್ಲ. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಬಾಗಲಕೋಟೆಯಲ್ಲಿಯೇ 2016ರಲ್ಲಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿ ಅರ್ಧಕ್ಕೆ ಬಿಟ್ಟರು. 2021ರಲ್ಲಿ ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಹೋರಾಟ ಆರಂಭಿಸಿ ಅರ್ಧಕ್ಕೆ ಬಿಟ್ಟರು ಹಾಗೆಯೇ ನೀವು ಸ್ಥಾಪಿಸಲು ಉದ್ದೇಶಿಸಿರುವ ಬ್ರಿಗೇಡ್ ಸಂಘಟನೆಯ ಆಯುಸ್ಸು ಎಷ್ಟು ದಿನ” ಎಂದು ಪ್ರಶ್ನಿಸಿದರು.
“ಈಶ್ವರಪ್ಪನವರು ಬ್ರಿಗೇಡ್ ಸಂಘಟನೆಯನ್ನು ಕೂಡಲಸಂಗಮದಲ್ಲಿ ಉದ್ಘಾಟನೆ ಮಾಡುವ ಮೊದಲು ರಾಜ್ಯದಲ್ಲಿ ಪಶ್ಚತ್ತಾಪ ಯಾತ್ರೆ ಮಾಡಿ ಈವರೆಗೆ ನಡೆದ ತನ್ನ ಕೋಮು ದ್ವೇಷದ ನಡೆಗಳ ಬಗ್ಗೆ ಜನರ ಬಳಿ ಕ್ಷಮಾಪಣೆ ಕೇಳಲಿ. ನಿಮ್ಮ ಸ್ವಾರ್ಥಕ್ಕಾಗಿ ರಾಯಣ್ಣ ಮತ್ತು ಚನ್ನಮ್ಮಳನ್ನು ಒಂದು ಜಾತಿ ಮತ್ತು ಧರ್ಮಕ್ಕೆ ಸೀಮಿತಗೊಳಿಸಬೇಡಿ. ಅವರು ನಮ್ಮ ನಾಡಿನ ಸಮಸ್ತ ಜನರ ಆಸ್ತಿ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕುಂಟು ನೆಪ ಹೇಳದೆ ಒಳಮೀಸಲಾತಿ ಜಾರಿಯಾಗಲಿ: ಡಿ ಬಿ ಮಧುರ
“ಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಇನ್ನುಳಿದ ಎಲ್ಲ ಸ್ವಾಮೀಜಿಗಳಲ್ಲಿ ನನ್ನ ಮನವಿ ಏನೆಂದರೆ, ಈಶ್ವರಪ್ಪನವರ ಕೈಯಲ್ಲಿ ಖಡ್ಗ ನೀಡಬೇಡಿ. ಸಂವಿಧಾನ ಪುಸ್ತಕ ಮತ್ತು ಶರಣರ ವಚನ ಸಾಹಿತ್ಯವನ್ನು ನೀಡಿ, ಈಶ್ವರಪ್ಪನವರು ರಾಜಕೀಯ ಸಂಧ್ಯಾ ಕಾಲದಲ್ಲಿ ಬದಲಾವಣೆಯಾಗಲಿ” ಎಂದು ಕೋರಿದರು.
ಭೀಮ್ ಆರ್ಮಿ ಭಾರತ ಏಕತಾ ಮಿಷನ್ ಮುಧೋಳ ತಾಲೂಕು ಅಧ್ಯಕ್ಷ ಶೇಖರ್ ಕಾಂಬಳೆ, ಕೃಷ್ಣಾ ಮುಧೋಳ ಮತ್ತು ಸುರೇಶ ಕಿಲಾರಿ ಇದ್ದರು.