ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ತೀವ್ರ ವಿರೋಧಿಸಿ ಅಂಜುಮನ್-ಇ-ಇಸ್ಲಾಂ ವತಿಯಿಂದ ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ಬೃಹತ್ ಶಾಂತಿಯುತ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು “Once a Waqf, Always a Waqf”, “ವಕ್ಫ್ ಉಳಿಸಿ–ಸಂವಿಧಾನ ರಕ್ಷಿಸಿ”, “ರಾಜಕೀಯ ಹಸ್ತಕ್ಷೇಪ ನಿಲ್ಲಿಸಿ” ಘೋಷಣೆಗಳೊಂದಿಗೆ ಬ್ಯಾನರ್‌ಗಳು ಹಾಗೂ ಪ್ಲೆ-ಕಾರ್ಡ್‌ಗಳನ್ನು ಹಿಡಿದು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ವಕ್ಫ್ ಆಸ್ತಿಗಳು ಧಾರ್ಮಿಕವಾಗಿ ಸ್ಥಾಪಿತವಾದವುಗಳಾಗಿದ್ದು, ಅದರಲ್ಲಿ ಯಾವುದೇ ರೀತಿಯ ತಿದ್ದುಪಡಿ ಅಥವಾ ಸರ್ಕಾರಿ ಹಸ್ತಕ್ಷೇಪವನ್ನು ಮುಸ್ಲಿಂ ಸಮುದಾಯ ಒಪ್ಪಿಕೊಳ್ಳುವುದಿಲ್ಲ ಎಂದು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ನೀಡಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಧಾರ್ಮಿಕ ಹಾಗೂ ಸಾಮಾಜಿಕ ನಾಯಕರು ಮಾತನಾಡುತ್ತಾ, ವಕ್ಫ್ ತಿದ್ದುಪಡಿ ಕಾಯ್ದೆ ಭಾರತದ ಸಂವಿಧಾನದ ವಿಧಿ 25 ಮತ್ತು 26ರಂತೆ ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯ ಮತ್ತು ಹಕ್ಕುಗಳಿಗೆ ವಿರುದ್ಧವಾಗಿರುವುದಾಗಿ ಹೇಳಿದ ಅವರು ಈ ಕಾಯ್ದೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಬಾಗಲಕೋಟೆ | ಈದ್ ಮಿಲನ್ ಕಾರ್ಯಕ್ರಮ ಯಶಸ್ವಿ
ಈ ತಿದ್ದುಪಡಿಯನ್ನು ಪೂರ್ಣವಾಗಿ ಹಿಂಪಡೆಯುವವರೆಗೆ ದೇಶದಾದ್ಯಾಂತ ಕಾನೂನುಬದ್ಧ ಹಾಗೂ ಪ್ರಜಾತಾಂತ್ರಿಕ ಹೋರಾಟ ಮುಂದುವರಿಯಲಿದೆ ಎಂದು ಅಂಜುಮನ್-ಇ-ಇಸ್ಲಾಂ ಇಲಕಲ್‌ನ ಮುಖಂಡರು ಘೋಷಿಸಿದರು.