ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರತಿಪಾದಿಸಿಕೊಂಡಿರುವ ವಿಶ್ವದ ಅತಿ ದೊಡ್ಡ ಪ್ರಜಾ ಪಭುತ್ವ ರಾಷ್ಟ್ರ ಭಾರತ. ಇಂತಹ ದೇಶದಲ್ಲಿ 2014 ರಿಂದ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದಿರುವ ಭಾರತೀಯ ಜನತಾ ಪಕ್ಷ ಸರ್ಕಾರ ಒಂದು ನಿರ್ದಿಷ್ಟವಾದ ಸಮುದಾಯದ ಆಚರಣೆ, ಧಾರ್ಮಿಕ ವ್ಯವಸ್ಥೆಯ ಮೇಲೆ ಸಂವಿಧಾನದ ಆಶಯಕ್ಕೆ ವಿರೋಧವಾಗಿ ಧರ್ಮದ ಜನರನ್ನು ಹತ್ತಿಕ್ಕಲು ಹಾಗೂ ಅವರ ಹಕ್ಕುಗಳನ್ನು ಕಸಿದುಕೊಳ್ಳಲು ನಿರಂತರವಾಗಿ ಪಯತ್ನ ಮಾಡುತ್ತಲೆ ಇದೆ. ಈ ಕಾರ್ಯಸೂಚಿಯ ಮುಂದುವರೆದ ಭಾಗವೇ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿರುವುದು ಎಂದು ಮೌಲಾನಾ ದಾವೂದ್ ಖಾಜಿ ಹೇಳಿದರು.
ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ಕರ್ನಾಟಕ ಮುಸ್ಲಿಂ ಯುನಿಟಿ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕು ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಪ್ರತಿಭಟನೆ ಉದ್ದೇಶಿಸಿ ದಲಿತ ಮುಖಂಡ ಮಹದೇವ ಹಾದಿಮನಿ, ನ್ಯಾಯವಾದಿ ಸಂತೋಷ ಬಗಲಿ ಕೂಡ ಮಾತನಾಡಿದರು.
ಪ್ರತಿಭಟನಾ ರ್ಯಾಲಿಯು ಅಂಜುಮನ್ ಶಾದಿ ಮಹಲದಿಂದಾ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಟಿಪ್ಪು ಸುಲ್ತಾನ್ ವೃತ್ತ ಹಾಗೂ ಗಾಂಧಿ ವೃತ್ತದ ಮಾರ್ಗದ ಮೂಲಕ ಘೋಷಣೆಗಳನ್ನು ಕೂಗುತ್ತ ತಹಶೀಲ್ದಾರ್ ಕಚೇರಿವರೆಗೆ ನಡೆಯಿತು.

“ಸಂವಿಧಾನವನ್ನು ಅನುಸರಣೆ ಮಾಡಿಕೊಂಡು ಜಾತ್ಯತೀತ ಮನೋಭಾವನೆಯಲ್ಲಿ ಗಟ್ಟಿಯಾದ ಸಾಮಾಜಿಕ ತಳಹದಿಯನ್ನು ಹೊಂದಿರುವ ಏಕೈಕ ರಾಷ್ಟ್ರ ಭಾರತವಾಗಿದೆ” ಎಂದು ದಲಿತ ಮುಖಂಡ ಮಹಾದೇವ ಹಾದಿಮನಿ ಹೇಳಿದರು.
“ನಮ್ಮ ದೇಶದ ವಕ್ಫ್ ಕಾಯ್ದೆಗೆ ಶತಮಾನದ ಇತಿಹಾಸ ಇದೆ. ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಕಾಯ್ದೆಯ ತಿದ್ದುಪಡಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ಇಡೀ ವಕ್ಫ್ ಆಸ್ತಿಯನ್ನು ಸರ್ಕಾರದ ಹಿಡಿತಕ್ಕೆ ತೆಗೆದುಕೊಳ್ಳುವ ವ್ಯವಸ್ಥಿತವಾದ ಪಿತೂರಿ ನಡೆಸಿದೆ. ಕಳೆದ ಹತ್ತು ವರ್ಷಗಳಲ್ಲಿ ದೇಶದ ಮುಸ್ಲಿಮರ ಸಾಮಾಜಿಕ ಅಭಿವೃದ್ಧಿಗೆ ಚಿಂತಿಸದ ಕೇಂದ್ರ ಸರ್ಕಾರ ಪೌರತ್ವ ಕಾಯಿದೆ, ವಿಶೇಷ ಸ್ಥಾನಮಾನ ರದ್ದತಿ, ಹಿಜಾಬ್, ಹಲಾಲ್ ಹೆಸರಿನಲ್ಲಿ ಮುಸ್ಲಿಮರನ್ನು ಸಮಾಜದ ಮುಖ್ಯ ವಾಹಿನಿಯಿಂದ ದೂರ ತಳ್ಳುವ ಪ್ರಯತ್ನ ಮಾಡುತ್ತಿದೆ. ಈಗ ಸಂಸತ್ತಿನಲ್ಲಿ ಅಂಗೀಕಾರವಾಗಿರುವ ವಕ್ಫ್ ತಿದ್ದುಪಡಿ ಮಸೂದೆ ಸಂವಿಧಾನದ 15, 25, 26ನೇ ವಿಧಿ ಮತ್ತು ಧಾರ್ಮಿಕ ದತ್ತಿ ಕಾಯ್ದೆಗೆ ವಿರುದ್ಧವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಾಗಲಕೋಟೆ | ರೈತರಿಗೆ ಬಿತ್ತನೆಬೀಜ, ಗೊಬ್ಬರ, ಕೀಟನಾಶಕಗಳನ್ನು ವಿತರಿಸಿ: ಮಹಾಂತೇಶ ಹಟ್ಟಿ
ಪ್ರತಿಭಟನೆಯಲ್ಲಿ ಅಬುಷಮಾ ಖಾಜಿ, ಕಾಸಿಮಲಿ ಗೋಟೆ, ಚಿನ್ನಪ್ಪ ಬಂಡಿವಡ್ಡರ,ದಾವೂದ್ ಖಾಜಿ, ಹಾಸಿಂಪಿರ್ ಮುಜಾವರ್, ಸಂತೋಷ್ ಬಗಲಿ, ಮೌಲಾನಾ ಅಬ್ದುಲವಹಾಬ್ ಖಾಜಿ,ಇರ್ಫಾನ್ ಅಥಣಿ, ಅಜೀಜ್ ಬಾಯಿಸರ್ಕಾರ್, ಸಾದಿಕ್ ಬಾಗವಾನ್ ಹಾಗೂ ಅಪಾರ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದವರು ಭಾಗವಹಿಸಿದ್ದರು.