ಕ್ಷೀರ ಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಹಾಲು ಕೊಡಲು ಶಾಲೆಗಳಿಗೆ ವಿತರಿಸಲಾಗುವ ಹಾಲಿನ ಪುಡಿಯನ್ನು ಕದ್ದು ಮಾರಾಟ ಮಾಡುತ್ತಿದ್ದ ಜಾಲವನ್ನು ಬಾಗಲಕೋಟೆ ಪೊಲೀಸರು ಬೇಧಿಸಿದ್ದಾರೆ. ಜಿಲ್ಲೆಯ 127 ಶಾಲೆಗಳ ಮುಖ್ಯ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಕ್ಷೀರ ಭಾಗ್ಯ ಯೋಜನೆಯಡಿ ಶಾಲೆಗಳಿಗೆ ಬರುವ ಹಾಲಿನ ಪುಡಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಮಕ್ಕಳ ಹಾಲಿಗೆ ಕನ್ನ ಹಾಕಲಾಗುತ್ತಿದೆ ಎಂಬ ಆರೋಪ ಈ ಹಿಂದೆಯಿಂದಲೇ ಕೇಳಿಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಬಾದಾಮಿ ತಾಲೂಕಿನ ಸೂಳಿಕೇರಿ ಗ್ರಾಮದಲ್ಲಿ ದಾಳಿ ನಡೆಸಿದ್ದ ಪೊಲೀಸರು ಟನ್ ಗಟ್ಟಲೆ ಹಾಲಿನ ಪ್ಯಾಕೆಟ್‌ಗಳನ್ನು ಜಪ್ತಿ ಮಾಡಿದ್ದರು. ಆ ಪ್ರಕರಣದಲ್ಲಿ ಇದೀಗ, 127 ಶಾಲೆಗಳ ಮುಖ್ಯ ಶಿಕ್ಷಕರಿಸಿಗೆ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ.
ಸೂಳಿಕೇರಿಯಲ್ಲಿ ದಾಳಿ ನಡೆಸಿದ್ದ ಪೊಲೀಸರು ಸುಮಾರು 18.14 ಲಕ್ಷ ರೂ. ಮೌಲ್ಯದ ಹಾಲಿನ ಪುಡಿ ಪ್ಯಾಕೆಟ್, ರಾಗಿ ಹಿಟ್ಟು, ಅಡುಗೆ ಎಣ್ಣೆ ಪಾಕೇಟ್‌ಗಳನ್ನು ಜಪ್ತಿ ಮಾಡಿದ್ದರು. ಇದರಲ್ಲಿ, ಬರೋಬ್ಬರಿ 4,475 ಕೆಜಿ ಹಾಲಿನ ಪುಡಿ ಪಾಕೇಟ್‌ಗಳಿದ್ದವು. ದಾಳಿ ವೇಳೆ ಆರೋಪಿ ಸಿದ್ದಪ್ಪ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.
ಆರೋಪಿಯನ್ನು ವಿಚಾರಣೆ ಒಳಪಡಿಸಿದಾಗ, ಆತ ಯಾವೆಲ್ಲ ಶಾಲೆಗಳಿಂದ ಹಾಲಿನ ಪ್ಯಾಕೆಟ್ ಬರೆದಿದ್ದನೆಂಬುದರ ಬಗ್ಗೆ ಮಾಹಿತಿ ನೀಡಿದ್ದಾನೆ. ಅಲ್ಲದೆ, ಹಾಲಿನ ಪ್ಯಾಕೆಟ್‌ಗಳನ್ನು ಮಹಾರಾಷ್ಟ್ರ ಸಾಗಿಸುತ್ತಿದ್ದುದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಈ ವರದಿ ಓದಿದ್ದೀರಾ?: ಕೊಲೆಗೆ ಸುಪಾರಿ ಆರೋಪ; ಮುನಿರತ್ನ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು
ಆತನ ಹೇಳಿಕೆ ಪಡೆದ ಪೊಲೀಸರು ಬಾಗಲಕೋಟೆ, ಬಾದಾಮಿ ಹಾಗೂ ಹುನಗುಂದ ತಾಲೂಕಿನ 127 ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರಿಗೆ ನೋಟಿಸ್ ಕೊಟ್ಟಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಈ ಪೈಕಿ ಕೇವಲ 27 ಮಂದಿ ಮಾತ್ರವೇ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಹೇಳಲಾಗಿದೆ.
ಮಕ್ಕಳಿಗೆ ನೀಡಬೇಕಿದ್ದ ಹಾಲಿನ ಪ್ಯಾಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುಲಾಗುತ್ತಿದೆ. ಶಿಕ್ಷಕರ ಸಹಕಾರವಿಲ್ಲದೆ ಇದು ನಡೆಯಲು ಸಾಧ್ಯವಿಲ್ಲ. ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಮತ್ತು ಸ್ಥಳೀಯರು ಆಗ್ರಹಿಸಿದ್ದಾರೆ.