ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಸ್ವಚ್ಛತೆ, ಜನರ ಆರೋಗ್ಯ ಮತ್ತು ಸಾರ್ವಜನಿಕರ ದೈನಂದಿನ ಅಗತ್ಯಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿರುವ ಮುನಿಸಿಪಾಲಿಟಿಯ ಪೌರ ನೌಕರರ ನಾನಾ ಬೇಡಿಕೆಗಳ ಈಡೇರಿಕೆಗಾಗಿ ನಡೆಯುತ್ತಿರುವ ಮುಷ್ಕರಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ಮತ್ತು ಸಾಲಿಡಾರಿಟಿ ಯೂಥ್ ಮೂವ್ಮೆಂಟ್ ಇಳಕಲ್ ಸಂಘಟನೆಗಳು ಬೆಂಬಲ ಸೂಚಿಸಿ ಮುಷ್ಕರದಲ್ಲಿ ಭಾಗಿಯಾಗಿವೆ.
ಈ ಸಂದರ್ಭದಲ್ಲಿ ಹೋರಾಟದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಜಮಾಅತೆ ಇಸ್ಲಾಮಿ ಹಿಂದ್ ಮತ್ತು ಸಾಲಿಡಾರಿಟಿ ಯೂಥ್ ಮೂವ್ಮೆಂಟ್ ಇಳಕಲ್ ವತಿಯಿಂದ ಸರ್ಕಾರಕ್ಕೆ ಒತ್ತಾಯಿಸಲಾಯಿತು.
“ಭಾರತ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಘನತೆಯ ಬದುಕನ್ನು ಖಾತರಿಪಡಿಸುತ್ತದೆ. ಕಾಯಕವು ಯಾವುದೇ ಇದ್ದರೂ ಅದು ಗೌರವಕ್ಕೆ ಅರ್ಹವಾದುದು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕಾದುದು, ದುಡಿಸಿಕೊಳ್ಳುವವರ ಕರ್ತವ್ಯವಾಗಿದೆ” ಎಂದು ಪ್ರತಿಭಟನಾಕಾರರನ್ನು ಉದ್ದೇಶಿಸಿ ಹುಸೇನ್ ಬಾಷಾ ಸೂಳಿಭಾವಿ ರವರು ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪೌರ ಕಾರ್ಮಿಕರು/ನೌಕರರು ಘನತೆ ಮತ್ತು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಎಲ್ಲ ಬಗೆಯ ಸವಲತ್ತುಗಳನ್ನು ಸರ್ಕಾರ ನೀಡಬೇಕು. ಈ ಮೂಲಕ ಸರ್ಕಾರ ಶ್ರಮಿಕ ವರ್ಗಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ: ಬಾಗಲಕೋಟೆ | ಸಿಬ್ಬಂದಿಗಳಿಲ್ಲದ ಬಲಕುಂದಿ ಗ್ರಾಮ ಪಂಚಾಯಿತಿಗೆ ಬೀಗ
ಈ ವೇಳೆ ಜಮಾಅತೆ ಇಸ್ಲಾಮಿ ಹಿಂದ್ ಸದಸ್ಯ ನೂರ್ ಮುಹಮ್ಮದ್ ಬಿಳೇಕುದರಿ, ಗಪ್ಪಾರ್ ತಹಸೀಲ್ದಾರ್ ಮತ್ತು ಸಾಲಿಡಾರಿಟಿ ಯೂಥ್ ಮೂವ್ಮೆಂಟ್ ಇಳಕಲ್ ಇದರ ಸ್ಥಾನೀಯ ಅಧ್ಯಕ್ಷ ಹಬೀಬುಲ್ಲಾಹ್ ತಾವರಗೇರಿ, ಸದಸ್ಯ ಮುರ್ತುಜಾ ಕಾಕಬಾಲ ಸೇರಿದಂತೆ ಕಾರ್ಯಕರ್ತರು ಇದ್ದರು.