ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ತುರ್ತು ಸೇವೆಯನ್ನು ಒದಗಿಸಲು ಸರ್ಕಾರದಿಂದ ಮತ್ತೊಂದು ನೂತನ ಆ್ಯಂಬುಲೆನ್ಸ್ ವಾಹನಕ್ಕೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರು ಬುಧವಾರ ಚಾಲನೆ ನೀಡಿದರು.
ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಆ್ಯಂಬುಲೆನ್ಸ್‌ಗೆ ಚಾಲನೆ ನೀಡಿದ ಬಳಿಕ ಸಾರ್ವಜನಿಕ ಆಸ್ಪತ್ರೆಯನ್ನು ಸಂಪೂರ್ಣವಾಗಿ ವೀಕ್ಷಣೆ ಮಾಡಿ ಮಾತನಾಡಿ, “ಹುನುಗುಂದ ಹಾಗೂ ಇಳಕಲ್ ಅವಳಿ ತಾಲೂಕಿಗೆ ಆ್ಯಂಬುಲೆನ್ಸ್ ಅವಶ್ಯಕತೆ ಇತ್ತು. ಇದರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಆ್ಯಂಬುಲೆನ್ಸ್ ಒದಗಿಸುವಂತೆ ಮನವಿ ಮಾಡಿಕೊಂಡಾಗ ಅದಕ್ಕೆ ಸ್ಪಂದಿಸಿ ಅವಳಿ ತಾಲೂಕಿಗೆ ಎರಡು ನೂತನ ಆ್ಯಂಬುಲೆನ್ಸ್ ನೀಡಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಹೇಳಿದರು.
“ಕಳೆದ ಐದಾರು ವರ್ಷಗಳಿಂದ ಸಾರ್ವಜನಿಕ ಮತ್ತು ಸಮುದಾಯದ ಆಸ್ಪತ್ರೆಗಳಿಗೆ ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಮೂಲಸೌಕರ್ಯಗಳ ಕಾಮಗಾರಿಗಳಿಗೆ ಈಗಾಗಲೇ ಭೂಮಿ ಪೂಜೆ ಮಾಡಲಾಗಿದೆ. ಹುನಗುಂದ ತಾಲೂಕು, ಆಸ್ಪತ್ರೆಗೆ ತಾಯಿ-ಮಗು ಆಸ್ಪತ್ರೆಗೆ ಈಗಾಗಲೇ ಮಂಜೂರಾತಿ ದೊರೆತಿದೆ. ಹುನಗುಂದ ಸಾರ್ವಜನಿಕ ಆಸ್ಪತ್ರೆಯ ಕೆಲವು ಕೊಠಡಿಗಲ್ಲಿ ಕೆಳಗಿನಿಂದ ನೀರಿನ ಬುಗ್ಗೆಗಳು(ಸೆಲೆ) ಉಂಟಾಗಿದ್ದರಿಂದ, ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯಾಧಿಕಾರಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರ ರಿಪೇರಿ ಹಾಗೂ ಸುರಕ್ಷಿತವಾಗಿ ನಿರ್ಮಾಣಕ್ಕೆ ಕ್ರಮ ಹಾಗೂ ಶಿಥಿಲಾವಸ್ಥೆ ಕಟ್ಟಡಗಳನ್ನು ಪುನಃ ನಿರ್ಮಿಸುವ ಕಾರ್ಯವನ್ನು ಕೈಗೊಳ್ಳಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ನ.25ರಂದು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಐಕ್ಯತಾ ಸಮಾವೇಶ
ಆರೋಗ್ಯ ಸಮಿತಿ ಉಪಾಧ್ಯಕ್ಷ ಶಿವಾನಂದ ಕಂಠಿ, ಸಂಜು ಜೋಶಿ, ಸಂಗಣ್ಣ ಗಂಜಿಹಾಳ, ವಿಜಯ ಗದ್ದನಕೇರಿ, ತಾಲೂಕು ವೈದ್ಯಧಿಕಾರಿ ಡಾ. ಎಸ್ ಎಸ್ ಅಂಗಡಿ, ಮುಖ್ಯ ವೈದ್ಯಾಧಿಕಾರಿ ಡಾ. ಮಂಜುನಾಥ ಅಂಕೋಲ್ಕರ, ಸಂಗಣ್ಣ ಅವಾರಿ, ರಫೀಕ್ ವಾಲಿಕಾರ್ ಸೇರಿದಂತೆ ಇತರರು ಇದ್ದರು.