ಮುಂಬರುವ ನವೆಂಬರ್ 17ಕ್ಕೆ ಬಾಗಲಕೋಟೆಯಲ್ಲಿ ರಾಜ್ಯ ಮಟ್ಟದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಜರುಗಲಿದ್ದು, ಸಿಎಂ ಸಿದ್ದರಾಮಯ್ಯ ಆಗಮಿಸಿ ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.
ಮಂಗಳವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಯಕ್ರಮಕ್ಕೆ ಸಿಎಂ ಮತ್ತು ಡಿಸಿಎಂ ಹಾಗೂ ಸಹಕಾರ ಸಚಿವರು, ರಾಜ್ಯದ ಗಣ್ಯ ವ್ಯಕ್ತಿಗಳು, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರು, ರಾಜ್ಯದ ಹಿರಿಯ ಸಹಕಾರಿಗಳು ಆಗಮಿಸಲಿದ್ದಾರೆ. ಆದ್ದರಿಂದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿ ಯಶಸ್ವಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಹುಬ್ಬಳ್ಳಿ ಬೈಪಾಸ್ ರಸ್ತೆ, ಜಿಲ್ಲಾ ಪಶು ಆಸ್ಪತ್ರೆಯ ಎದುರಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಗ್ಯಾರಂಟಿ ಯೋಜನೆಯ ಫಲಾನುಭವಿಗಳು, ವಿವಿಧ ಸಹಕಾರ ಸಂಘಗಳ ಸಹಕಾರಿಗಳು, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಸತಿ ನಿಲಯಗಳ ಕಾಲೇಜು ವಿದ್ಯಾರ್ಥಿಗಳನ್ನು ಕರೆತರುವ ಕೆಲಸವಾಗಬೇಕು ಎಂದರು.
ವೇದಿಕೆ ಪಕ್ಕದಲ್ಲಿ 5 ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಹಾಗೂ ವಿವಿಧ ಇಲಾಖೆ ಸೇರಿದಂತೆ 15ಕ್ಕೂ ಹೆಚ್ಚು ವಸ್ತುಪ್ರದರ್ಶನ ಮಳಿಗೆ ಹಾಕುವ ವ್ಯವಸ್ಥೆ ಮಾಡಬೇಕು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗೆ ಸಂಬಂಧಿಸಿದ ಪ್ರಗತಿಯ ಮಾಹಿತಿ ವರದಿ ಇರಬೇಕು. ವೇದಿಕೆ ನಿರ್ಮಾಣದ ಕಾರ್ಯವನ್ನು ಸಹಕಾರ ಇಲಾಖೆ ಹಾಗೂ ಬಾಗಲಕೋಟೆ ಜಿಲ್ಲಾ ಸಹಕಾರಿ ಬ್ಯಾಂಕ್ ಜವಾಬ್ದಾರಿಯಾಗಿದ್ದು, ಅಚ್ಚುಕಟ್ಟಾಗಿ ವೇದಿಕೆ ನಿರ್ಮಿಸಲು ಸೂಚಿಸಿದರು.
ಈ ವರದಿ ಓದಿದ್ದೀರಾ? ಉತ್ತರ ಕನ್ನಡ | ಅನಾಥ ರಕ್ಷಕರ ಮೇಲೆ ಹಲ್ಲೆ, ಕೊಲೆ ಯತ್ನ : ತನಿಖೆಗೆ ಆಗ್ರಹ
ಸಹಕಾರ ಇಲಾಖೆಯ ಉಪನಿಬಂಧಕ ದಾನಯ್ಯ ಹಿರೇಮಠ ಅವರು ಕಾರ್ಯಕ್ರಮದ ರೂಪುರೇಷೆಗಳ ಮಾಹಿತಿಯನ್ನು ಸಭೆಗೆ ತಿಳಿಸಿದರು. ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು ಉಪಸ್ಥಿತರಿದ್ದರು.