ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದ ಕುರಿಗಾಹಿ ಶರಣಪ್ಪ ಜಮ್ಮನಕಟ್ಟಿ ಹತ್ಯೆಯನ್ನು ಖಂಡಿಸಿ ರಾಜ್ಯ ಕುರಿಗಾರರು ಮತ್ತು ಪಶುಪಾಲಕರ ಹಿತರಕ್ಷಣಾ ಸಮಿತಿ ಜಿಲ್ಲಾ ಘಟಕದಿಂದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.
ಕೊಲೆ ಮಾಡಿರುವ ಮೂವರು ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ರಾಜ್ಯಾದ್ಯಂತ ರೈತ ಸಮುದಾಯ ಹಾಗೂ ಹಿಂದುಳಿದ ವರ್ಗದವರು ಕುರಿಗಾರಿಕೆ ಮತ್ತು ಪಶುಸಂಗೋಪನೆ ಮೂಲಕ ಕುಟುಂಬದ ಆರ್ಥಿಕ ಪರಿಸ್ಥಿತಿ ನಿಭಾಯಿಸುತ್ತಾರೆ. ಅಂತಹ ಕುಟುಂಬಗಳಿಗೆ ರಕ್ಷಣೆ ನೀಡಬೇಕು” ಎಂದು ಒತ್ತಾಯಿಸಿದರು.
“ಕುರಿಗಾಹಿಗಳು ಬೆಟ್ಟ ಗುಡ್ಡಗಳಲ್ಲಿ ಸಂಚರಿಸುತ್ತಾರೆ. ಹೊಲಗಳಲ್ಲಿಯೇ ತಿಂಗಳಗಟ್ಟಲೆ ವಾಸ್ತವ್ಯ ಮಾಡುತ್ತಾರೆ. ಅಂತಹವರ ರಕ್ಷಣೆಗೆ ಸರ್ಕಾರ ಹಿತರಕ್ಷಣಾ ಕಾಯ್ದೆ ಜಾರಿಗೆ ತರಬೇಕು. ಶರಣಪ್ಪ ಕುಟುಂಬಕ್ಕೆ ಸರ್ಕಾರ ಆರ್ಥಿಕ ನೆರವು ನೀಡಬೇಕು” ಎಂದು ಮನವಿ ಮಾಡಿಕೊಂಡರು.

ಯಲ್ಲಪ್ಪ ಹೆಗಡೆ ಮಾತನಾಡಿ, “ಕುರಿ ಕಾಯುವವರಿಗೆ ಭದ್ರತೆ, ರಕ್ಷಣೆ ಇಲ್ಲವಾಗಿದೆ. ಒಂದೇ ಸಮುದಾಯದವರು ಕುರಿ, ದನ ಕಾಯುವುದಿಲ್ಲ, ಕುರಿ ಕಾಯುವವರ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಕುರಿಗಾಹಿಗಳ ಹಿತರಕ್ಷಣಾ ಕಾಯಿದೆ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಈ ಹಿಂದೆ ಬಜೆಟ್‌ನಲ್ಲಿ ಭರವಸೆ ನೀಡಿದ್ದರು. ಈಗ ಮರೆತಿದ್ದಾರೆ. ಕೂಡಲೇ ಜಾರಿಗೊಳಿಸಬೇಕು” ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.
ಇದನ್ನೂ ಓದಿ: ಬಾಗಲಕೋಟೆ | ನೀರಿಗಾಗಿ ಜನರ ಪರದಾಟ; ಶಾಶ್ವತ ಪರಿಹಾರಕ್ಕೆ ವೆಲ್ಫೇರ್ ಪಾರ್ಟಿ ಮನವಿ
ಈ ಸಂದರ್ಭದಲ್ಲಿ ರಾಜ್ಯ ಕುರಿಗಾರರ ಮತ್ತು ಪಶು ಪಾಲಕರ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಪರಶುರಾಮ ಮಂಟೂರ, ಅಧ್ಯಕ್ಷ ಸಿದ್ದಪ್ಪ ಬಳಗಾನೂರ, ಮಲ್ಲು ವಡಗೇರ, ಶಿವಲಿಂಗ ಪೂಜಾರಿ, ಬಸವರಾಜ ತೆಲಗಿ, ಶಿವು ಕುರಿ, ರಾಮು, ಶಿವರಾಜ ರಾಕುಂಪಿ, ರಾಜಭಕ್ಷಿ, ಕಾಸಿಮ ಗೋಳಸಂಗಿ, ಇಮಾಮ್ ಹುಸೇನ್, ಶಿವಕುಮಾರ ಪೂಜಾರಿ, ನಿಂಗಪ್ಪ ಜೋಗಿ, ವಿಠಲ ದಂದರಿಂಗಿ ಶೇಖರ್ ಕಾಂಬಳೆ ರಾಜು ಮಣ್ಣಿಕೆರೆ ಇತರರು ಉಪಸ್ಥಿತರಿದ್ದರು.
