ಸ್ಥಳೀಯ ಪ್ರದೇಶಕ್ಕನುಗುಣವಾಗಿ ಆರಣ್ಯದಂಚಿನಲ್ಲಿ ಕುರಿ/ದನ ಮೇಯಿಸಲು ಅವಕಾಶ ಮಾಡಿಕೊಡುವ ಮೂಲಕ ಅರಣ್ಯಾಧಿಕಾರಿಗಳಿಂದ ಕುರಿ/ದನಗಾಹಿಗಳ ಮೇಲಾಗುವ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು ಎಂದು ಕುರಿಗಾಹಿಗಳು ಶಾಸಕ, ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಬಿ.ಟಿ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬಾಗಲಕೋಟೆಯ ಜಿಲ್ಲೆಯ ಬೀಳಗಿಯಲ್ಲಿ ಶಾಸಕರನ್ನು ಭೇಟಿ ಮಾಡಿದ ಯಲ್ಲಪ್ಪ ಹೆಗಡೆ ಮತ್ತು ಸಂಗಡಿಗರು, “ಕರ್ನಾಟಕ ರಾಜ್ಯಾದ್ಯಂತ ರೈತ ಸಮುದಾಯ, ಶೋಷಿತ ಸಮುದಾಯ ಹಾಗೂ ಹಿಂದುಳಿದ ವರ್ಗದವರು, ಕುರಿಗಾರಿಕೆ ಹಾಗೂ ಪಶುಸಂಗೋಪನೆ ಮಾಡುತ್ತ, ಬದುಕು ದೂಡುತ್ತಿದ್ದಾರೆ. ಬೆಟ್ಟ-ಗುಡ್ಡಗಳನ್ನು ಒಳಗೊಂಡತೆ ಎಲ್ಲಡೆ ಸುತ್ತುತ್ತಾ ಕುರಿಗಾರಿಕೆ ಹಾಗೂ ಪಶುಪಾಲನೆ ಮಾಡುತ್ತಿದ್ದಾರೆ. ಆದರೆ, ಅವರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ” ಎಂದು ಹೇಳಿದ್ದಾರೆ.
“ಕೊಲೆ, ಅತ್ಯಾಚಾರ ಲಂಚದ ಬೇಡಿಕೆ, ಜೀವ ಬೆದರಿಕೆ ಹಾಕುವ ಹಲವಾರು ಘಟನೆಗಳು ನಡೆದಿದ್ದು, ಅಸಂಖ್ಯಾತ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ. ರಾಜ್ಯ ಸರ್ಕಾರವು 2024-25ನೇ ಸಾಲಿನ ಬಜೆಟ್‌ನಲ್ಲಿ ಸಂಚಾರಿ ಕುರುಬರಿಗೆ ಸಂಬಂಧಿಸಿದಂತೆ ದೌರ್ಜನ್ಯ ತಡೆ ಕಾಯ್ದೆ ರೂಪಿಸಲು ಪ್ರಸ್ತಾಪಿಸಿರುವುದು ಸ್ವಾಗತಾರ್ಹ. ಕೇವಲ ಸಂಚಾರಿ ಕುರಿಗಾರರಿಗೆ ಮಾತ್ರ ಅನ್ವಯಿಸದೆ, ಕುರಿಗಾರಿಕೆ ಹಾಗೂ ಪಶುಸಂಗೋಪನೆ ಮೇಲೆ ಜೀವನ ಕಟ್ಟಿಕೊಂಡಂತಹ ಕುರಿಗಾರರು ಹಾಗೂ ಪಶುಪಾಲಕರಿಗೂ ಈ ಕಾಯ್ದೆ ವಿಸ್ತರಿಸಬೇಕು. ಅದಕ್ಕಾಗಿ, ಕರ್ನಾಟಕ ರಾಜ್ಯ ಕುರಿಗಾರರ ಮತ್ತು ಪಶುಪಾಲಕರ (ರಕ್ಷಣೆ ಮತ್ತು ದೌರ್ಜನ್ಯ ತಡೆ) ಕಾಯ್ದೆ 2024ನ್ನು ರಚಿಸಲು ಸರ್ಕಾರದ ಗಮನ ಸೆಳೆಯಬೇಕು” ಎಂದು ಒತ್ತಾಯಿಸಿದ್ದಾರೆ.