ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ರನ್ನ ವೈಭವೋತ್ಸವ ಆಯೋಜನೆಗೆ ಭರದ ಸಿದ್ಧತೆ ನಡೆದಿದ್ದು, ಮೂರು ದಿನಗಳ ಕಾಲ ಅರ್ಥಪೂರ್ಣವಾಗಿ ಉತ್ಸವ ನಡೆಸಲು ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ ಎಂ ಜಾನಕಿ ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ಫೆ.22 ರಿಂದ 24 ರವರೆಗೆ ಉತ್ಸವ ನಡೆಯಲಿದ್ದು, ಮೊದಲ ದಿನ ಬೆಳಗಲಿಯಲ್ಲಿ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ಇನ್ನೆರಡು ದಿನ ಮುಧೋಳದ ರನ್ನ ಕ್ರೀಡಾಂಗಣದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಕ್ರೀಡಾಂಗಣ ಹಾಗೂ ಅಂಬೇಡ್ಕರ್ ಭವನದಲ್ಲಿ ಎರಡು ವೇದಿಕೆಗಳನ್ನು ಸಜ್ಜುಗೊಳಿಸಲಾಗಿದ್ದು, ಬೆಳಗ್ಗೆ 11 ರಿಂದ ಕಾರ್ಯಕ್ರಮಗಳು ಶುರುವಾಗಲಿವೆ” ಎಂದು ಮಾಹಿತಿ ಹಂಚಿಕೊಂಡರು.
“ಫೆ.22 ರಂದು ಕಾನೂನು ಖಾತೆ ಸಚಿವ ಎಚ್ ಕೆ ಪಾಟೀಲ್ ಉತ್ಸವ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ, ಸಚಿವರಾದ ಎಚ್ ಸಿ ಮಹಾದೇವಪ್ಪ, ಶಿವಾನಂದ ಪಾಟೀಲ, ಪ್ರಿಯಾಂಕ್ ಖರ್ಗೆ, ಎಸ್ ಎಸ್ ಮಲ್ಲಿಕಾರ್ಜುನ, ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕರಾದ ಯಶವಂತರಾಯಗೌಡ ಪಾಟೀಲ ಹಾಗೂ ಲಕ್ಷ್ಮಣ ಸವದಿ ವಿಶೇಷ ಆಹ್ವಾನಿತರಾಗಿ ಉತ್ಸವಕ್ಕೆ ಆಗಮಿಸಲಿದ್ದಾರೆ. ರನ್ನ ಬೆಳಗಲಿಯಲ್ಲಿ 50 ಕಲಾ ತಂಡಗಳ ಕುಂಭಮೇಳ ಮೆರವಣಿಗೆ ನಡೆಯಲಿದೆ. ಅಲ್ಲದೆ ಮುಧೋಳದ ರನ್ನ ಭವನದಲ್ಲಿ ರನ್ನ ಕಾವ್ಯ ದರ್ಶನ ವಿಚಾರ ಸಂಕೀರ್ಣ ನಡೆಯಲಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?:ಬಾಗಲಕೋಟೆ | ಅತಿಕ್ರಮವಾಗಿ ನಿರ್ಮಿಸಿರುವ ಗ್ರಾನೈಟ್ ಫ್ಯಾಕ್ಟರಿ ತೆರವಿಗೆ ಕರವೇ ಆಗ್ರಹ
ಫೆ.23 ರಂದು ಬೆಳಗ್ಗೆ 10 ಗಂಟೆಗೆ ಮುಧೋಳದಲ್ಲಿ ಜನಪದ ಕಲಾ ವಾಹಿನಿಗಳ ಮೆರವಣಿಗೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪೂರ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 11ಕ್ಕೆ ವಿಚಾರಗೋಷ್ಠಿ ಇರಲಿದೆ. ಸಂಜೆ 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರನ್ನ ಹಳೆಗನ್ನಡ ಪ್ರಶಸ್ತಿ ವಿತರಿಸಲಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಗೃಹ ಸಚಿವ ಡಾ.ಜಿ ಪರಮೇಶ್ವರ್, ಸಚಿವರಾದ ರಾಮಲಿಂಗಾರೆಡ್ಡಿ, ಡಿ ಸುಧಾಕರ, ಬಿ ಎಸ್ ಸುರೇಶ್ ಭಾಗವಹಿಸಲಿದ್ದಾರೆ. ಫೆ.24 ರಂದು ಬೆಳಗ್ಗೆ 10:30ಕ್ಕೆ ಕವಿಗೋಷ್ಠಿಇರಲಿದೆ. ವಿಧಾನಸಭಾ ಅಧ್ಯಕ್ಷ ಯುಟಿ ಖಾದರ್, ಸಚಿವರಾದ ಎಂಬಿ ಪಾಟೀಲ, ಸಂತೋಷ ಲಾಡ್, ಸತೀಶ ಜಾರಕಿಹೊಳಿ, ಶಾಸಕ ವಿನಯ ಕುಲಕರ್ಣಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
