ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಫೆಬ್ರವರಿ 16ರಂದು ಮಂಡಿಸಿದ 2024-25ರ ಬಜೆಟ್ಟಿನಲ್ಲಿ 2014-15ರಲ್ಲಿ ತಾವೇ ಘೋಷಣೆ ಮಾಡಿದ್ದ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಒಂದೇ ಒಂದು ರೂಪಾಯಿ ಅನುದಾನ ಒದಗಿಸಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಬಾಗಲಕೋಟೆ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಆರೋಪಿಸಿದರು.
ಬಾಗಲಕೋಟೆಯಲ್ಲಿ ಪತ್ರಿಕೆ ಹೇಳಿಕೆ ನೀಡಿರುವ ಅವರು, “ತಮಗೆ ರಾಜಕೀಯ ಪುನರ್ಜನ್ಮ ನೀಡಿದ ಬಾಗಲಕೋಟೆ ಜಿಲ್ಲೆಗೆ ಅನ್ಯಾಯ ಎಸಗಿದ್ದಾರೆ. ಚುನಾವಣೆ ಪ್ರಚಾರದಲ್ಲಿ ʼತಮ್ಮ ಸರ್ಕಾರ ಬಂದ ಮೊದಲ ಬಜೆಟ್ಟಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನುದಾನ ಒದಗಿಸಿ ಗುದ್ದಲಿ ಪೂಜೆಗೂ, ಉದ್ಘಾಟನೆಗೂ ನಾನೇ ಬರ್ತೀನಿʼ ಅಂತ ಭರವಸೆ ನೀಡಿ ಜಿಲ್ಲೆಯ ಜನತೆಗೆ ನಂಬಿಕೆ ದ್ರೋಹ ಮಾಡಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನೀಡುವ ಗುರಿ ಹೊಂದಿರುವ ಬಜೆಟ್: ರಮೇಶ್ ಕಾಂಚನ್
“ಬಾಗಲಕೋಟೆ ಮತಕ್ಷೇತ್ರದ ಶಾಸಕ ಎಚ್ ವಾಯ್ ಮೇಟಿ ಅವರು ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ಪ್ರತಿಭಟನೆ ನಡೆಸಿಯಾದರೂ ಸರಿ ಪಟ್ಟು ಹಿಡಿದು ಹೆಚ್ಚುವರಿ ಬಜೆಟ್ಟಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನುದಾನ ತರಲೇಬೇಕು. ಇಲ್ಲದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ, ಬಾಗಲಕೋಟೆ ಜಿಲ್ಲಾ ಘಟಕದಿಂದ ಶಾಸಕರ ಸರ್ಕಾರಿ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.