ಗುರುವಾರ ರಾತ್ರಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದು, ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಹಲವು ಮನೆಗಳ ಛಾವಣಿ ಶೀಟ್‌ಗಳು ಹಾರಿದ್ದು, ಕೆಲವು ಮನೆಗಳ ಮೇಲೆ ಮರಗಳು ಬಿದ್ದಿವೆ. ನೇಕಾರಿಕೆ ವಸ್ತುಗಳ ಹಾನಿಯಿಂದ ಜನರ ಬದುಕು ಬೀದಿಗೆ ಬಂದಿದೆ.
ಬಿರುಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನತೆ ನಿಟ್ಟುಸಿರು ಬಿಡುವಂತಾಗಿದ್ದರೆ, ಇನ್ನೊಂದೆಡೆ ಮಹಾಲಿಂಪುರದಲ್ಲಿ ಸುರಿದ ಬಿರುಗಾಳಿ ಸಹಿತ ಮಳೆಗೆ ಮಹಿಳೆ ಸೇರಿದಂತೆ ನಾಲ್ಕೈದು ಮಂದಿಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಮರ ಬಿದ್ದು ಟ್ರಾಫಿಕ್ ಜಾಮ್: ವಿಪರೀತ ಗಾಳಿಗೆ ರಬಕವಿ ರಸ್ತೆಯ ಗಿರಿಮಲ್ಲೇಶ್ವರ ಆಶ್ರಮದ ಹತ್ತಿರ ಮತ್ತು ಪೊಲೀಸ್ ಠಾಣೆಯ ಬಳಿ ಬೃಹತ್ ಮರಗಳು ಬಿದ್ದ ಪರಿಣಾಮ ಕೆಲವು ಗಂಟೆಗಳವರೆಗೆ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಮಹಾಲಿಂಗಪೂರ ಪಟ್ಟಣದ ಕೆಂಗೇರಿ ಮಡ್ಡಿ ಓಣಿಯಲ್ಲಿ ಮಳೆಯಿಂದ ಅಪಾರ ಹಾನಿಯಾಗಿದ್ದು, ಅದೃಷ್ಟವಶಾತ್ ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನೇಕಾರಿಕೆ ವಸ್ತುಗಳ ಹಾನಿ
ಪಾವರ್ ಲೂಮ್ ಮಗ್ಗಗಳು, ಸೀರೆ, ಕಚ್ಚಾ ವಸ್ತುಗಳು ಸೇರಿ ನೇಕಾರಿಕೆ ವಸ್ತುಗಳು ಹಾನಿಗೊಂಡಿವೆ. ಪರಿಣಾಮವಾಗಿ ಕೆಂಗೇರಿ ಮಡ್ಡಿ ಓಣಿಯ ಜನರ ಬದುಕು ಚಿಂತಾಜನಕವಾಗಿದೆ.
ಮಳೆಯ ಜೊತೆಗೆ ಬೀಸಿದ ಬಿರುಗಾಳಿಯಿಂದಾಗಿ ಪಟ್ಟಣದ ಬಸವನಗರ, ಬುದ್ನಿಪಿಡಿ, ಕೆಂಗೇರಿಮಡ್ಡಿ ಸೇರಿದಂತೆ ಹಲವು ಭಾಗಗಳಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿತ್ತು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಗುಡುಗು ಸಹಿತ ಭಾರೀ ಮಳೆ; ಅಪಾರ ಬೆಳೆ ಹಾನಿ
ವಿಪರೀತ ಗಾಳಿಯಿಂದಾಗಿ ಸುತ್ತಮುತ್ತಲಿನ ಗ್ರಾಮಗಳ ತೋಟಗಳಲ್ಲಿನ ತಗಡು ಶೀಟುಗಳು ಹಾರಿ ಹೋಗಿದ್ದು ರೈತರು ಪರದಾಡುವಂತಾಯಿತು. ಮಳೆಯಿಂದ ಹಾನಿಗೆ ಒಳಗಾದ ಜನತೆಗೆ ಸರ್ಕಾರ ಕೂಡಲೇ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ತಹಶೀಲ್ದಾರ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.