ಶಕ್ತಿ ಯೋಜನೆಯ ವಿರುದ್ಧ ವಿರೋಧಿಗಳು ಅಪಹಾಸ್ಯ ಮಾಡುತ್ತಲೇ ಇದ್ದಾರೆ. ಸರ್ಕಾರಿ ಸಾರಿಗೆ ಬಸ್‌ಗಳ ಕೆಲವು ಚಾಲಕ-ನಿರ್ವಾಹಕರೂ ಇಂತಹ ಅಪಹಾಸ್ಯ ಮಾಡುತ್ತಿರುವುದು ವರದಿಯಾಗಿದೆ. ಅಂತಹ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸಾರಿಗೆ ನಿಗಮಗಳು ಹೇಳಿವೆ.
ಈ ನಡುವೆ, ನಿಲ್ದಾಣದಲ್ಲಿ ಬಸ್ ನಿಲ್ಲಿಸುವಂತೆ ಕೈ ಬೀಸಿದರೂ, ನಿಲ್ಲಿಸದೆ ಮುಂದೆ ಹೋದ ಬಸ್‌ಗೆ ಮಹಿಳೆಯೊಬ್ಬರು ಕಲ್ಲೆಸೆದು, ದಂಡ ತೆತ್ತು, ಅದೇ ಬಸ್‌ನಲ್ಲಿ ಪ್ರಯಾಣಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳಿದ್ದ ಮಹಿಳೆ ಬಾಗಲಕೋಟೆ ಜಿಲ್ಲೆಯ ಇಳಕಲ್‌ಗೆ ಮರಳುತ್ತಿದ್ದರು. ಬಾದಾಮಿ ತಾಲೂಕಿನ ಲಿಂಗಾಪುರ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾದು ಕುಳಿತಿದ್ದರು. ಯಾವುದೇ ಬಸ್ ಬಾರದ ಕಾರಣ ಭ್ರಮನಿರಸನಗೊಂಡಿದ್ದರು. ಈ ವೇಳೆ, ಬಂದ ಕೊಪ್ಪಳ-ಹೊಸಪೇಟೆ ನಾನ್‌ಸ್ಟಾಪ್ ಬಸ್‌ಗೆ ನಿಲ್ಲಿಸುವಂತೆ ಕೈ ಬೀಸಿದ್ದಾರೆ. ಬಸ್ ನಿಲ್ಲಿಸದಿದ್ದಾಗ ಕಲ್ಲು ಎಸೆದಿದ್ದಾರೆ.
ಕಲ್ಲು ಬಿದ್ದ ಬಸ್‌ನ ಕಿಟಕಿಗೆ ಹಾನಿಯಾಗಿದೆ. ಬಳಿಕ ಬಸ್ ಚಾಲಕ ಬಸ್ ನಿಲ್ಲಿಸಿ, ಆಕೆಯನ್ನು ಹತ್ತಿಕೊಂಡು ಮುನಿರಾಬಾದ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಬಟ್ ಕಿಟಕಿ ರಿಪೇರಿಗಾಗಿ 2,000 ರೂ. ದಂಡ ಪಾವತಿಸಿದ ಮಹಿಳೆ, ಅದೇ ಬಸ್‌ನಲ್ಲಿ ತನ್ನೂರಿಗೆ ತೆರಳಿದ್ದಾರೆ.
“ಲಿಂಗಾಪುರ ನಿಲ್ದಾಣದಲ್ಲಿ ಯಾವು ಬಸ್ ಕೂಡ ನಿಲ್ಲಿಸುತ್ತಿರಲಿಲ್ಲ. ಬಸ್ ನಿಲ್ಲಿಸದಿದ್ದರೆ ನಾವು ಪ್ರಯಾಣಿಸುವುದು ಹೇಗೆ. ಕಾದು ಕಾದು ಬಸವಳಿದು, ಕಲ್ಲು ಎಸೆದೆ ಎಂದು ಆಕೆ ತನ್ನ ಅಸಹಾಯಕತೆ ತೋಡಿಕೊಂಡಿದ್ದಾರೆ” ಎಂದು ವರದಿಯಾಗಿದೆ.