ಸಾಹಿತಿಗಳು ಪರಾವಲಂಬಿಗಳಾಗಬಾರದು. ಸಂವಿಧಾನವನ್ನು ರಾಜಕೀಯ ಪಠ್ಯವಾಗಿ ನೋಡದೆ ಸಾಂಸ್ಕೃತಿಕ ಪಠ್ಯವಾಗಿ ಅರಿಯಬೇಕಾಗಿದೆ ಎಂದು ಕಾದಂಬರಿಕಾರ ಸಾಹಿತಿ ಶ್ರೀಧರ ಬಳಿಗಾರ ಹೇಳಿದರು.
ಬಾಗಲಕೋಟೆ ನವನಗರದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ಭಾನುವಾರ ಯಂಡಿಗೇರಿಯ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
“ಪ್ರಶಸ್ತಿಗಳು ವ್ಯಕ್ತಿಗಲ್ಲ, ಆತನ ಕೃತಿಗೆ ಕೊಡುತ್ತಿರುವುದು ಖುಷಿಯ ಸಂಗತಿ. ಸಾಹಿತ್ಯ ಅನನ್ಯವಾದ ಸಂವೇದನೆ, ದಿನನಿತ್ಯ ಬಳಸುವ ಶಬ್ದಗಳನ್ನು, ಪದಗಳನ್ನು ಅನನ್ಯವಾದ ಅನುಭವವನ್ನು ಅಭಿವ್ಯಕ್ತಿ ಮಾಡಬೇಕಾಗುತ್ತದೆ. ಜೊತಗೆ ಓದುಗನು ಕೂಡ ಅನುಭವಿಸುವಂತೆ ಮಾಡಬಹುದಾದ ಶಕ್ತಿ ಸಾಹಿತ್ಯಕ್ಕಿದೆ. ಓದುಗನಲ್ಲಿರುವ ಸಾಂಸ್ಕೃತಿಕ ಸ್ಮೃತಿಗಳನ್ನು ಜಾಗೃತಗೊಳಿಸಬೇಕು. ಬರವಣಿಗೆಯಲ್ಲಿ ಕಲಾತ್ಮಕತೆ ಅಗತ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು.
ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ವಿಷ್ಣುವರ್ಧನ ಮಾತನಾಡಿ, “ನಾಡಿನ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಸಾಹಿತಿಗಳು ಚಿಂತನೆಮಾಡಬೇಕಿದೆ. ಆ ನಿಟ್ಟಿನಲ್ಲಿ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನ ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಸಮಾಜಮುಖಿ ಕಾರ್ಯ ಶ್ಲಾಘನೀಯ. ಸಾಹಿತ್ಯ ಜನರನ್ನು ಸದಾ ಎಚ್ಚರಿಸುವ ಸಾಧನ. ಇಂದಿನ ಸಾಹಿತ್ಯದ ದಿಕ್ಕು ಎತ್ತ ಸಾಗಿದೆ ಎಂಬುದನ್ನು ಚಿಂತನೆ ಮಾಡಬೇಕಾದ ಅನಿವಾರ್ಯತೆ ಇದೆ. ನಮ್ಮ ನಾಡಿನ ಸಂಸ್ಕೃತಿಯನ್ನು ಉಳಿಸುವಲ್ಲಿ ಸಾಹಿತಿಗಳು ಚಿಂತನೆ ಮಾಡಬೇಕಿದೆ” ಎಂದರು.
ತೀರ್ಪುಗಾರರಾಗಿದ್ದ ವಿಮರ್ಶಕ ಎಸ್.ಆರ್. ವಿಜಯಶಂಕರ ಮಾತನಾಡಿ, “ಕಾದಂಬರಿಗಳು ಜನರಿಗೆ ಬೇಕಾದ ಸಂಪೂರ್ಣ ಮಾಹಿತಿಯನ್ನು ಕೊಡಬಹುದಾಗಿವೆ. ಪ್ರಜ್ಞಾವಂತ ಲೇಖಕರು ಸಾಮಾಜಿಕ ಸಮಸ್ಯೆಗಳನ್ನು ಹತ್ತಿರದಿಂದ ನೋಡಿ ಪ್ರಶ್ನಿಸುವುದು ಅಗತ್ಯವಾಗಿದೆ. ಪ್ರಶ್ನಿಸುವುದರಿಂದ ಸತ್ಯಾಸತ್ಯಗಳನ್ನು ಹೊರಗೆಳೆಯಲು ಸಹಾಯವಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ?: ಬಾಗಲಕೋಟೆ | ಮೂರು ದಿನಗಳ ಕಾಲ ರನ್ನ ವೈಭವಕ್ಕೆ ಸಕಲ ಸಿದ್ಧತೆ
ಕಾರ್ಯಕ್ರಮದಲ್ಲಿ ಸಾಹಿತಿ ಕೇಶವ ಮಳಗಿ, ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನದ ಅಧ್ಯಕ್ಷ ಮಲ್ಲಿಕಾರ್ಜುನ ಶೆಲ್ಲಿಕೇರ, ಸಂಗಮೇಶ ಪಾನಶೆಟ್ಟಿ, ಡಾ. ಚಂದ್ರಶೇಖರ ಕಾಳನ್ನವರ, ಶಿವಾನಂದ ಶೆಲ್ಲಿಕೇರಿ, ಗುರು ಗಾಣಗೇರ ಸೇರಿದಂತೆ ಇತರರಿದ್ದರು.
